ನವಲಗುಂದ : ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’, ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬ ರೈತನ ಮಹತ್ವ ಸಾರುವ ಸಂದೇಶಗಳನ್ನು ನಾವು ನೀವೆಲ್ಲ ಕೇಳಿರುತ್ತೇವೆ. ಆದರೆ ರೈತ ಕುಲ ಅನುಭವಿಸುವ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯ ಮಾಡುತ್ತಿದೆ ದೇಶಪಾಂಡೆ ಫೌಂಡೇಶನ್.
ಹದಭರಿತ ಮಳೆಯಾಗದ ಕಾರಣ ರೈತರು ದಿನದಿಂದ ದಿನಕ್ಕೆ ಕೃಷಿಯಲ್ಲಿನ ಒಲವು ಕಳೆದುಕೊಳ್ಳುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಕೈ ತಪ್ಪುತ್ತಿರುವ ಪಾಡು ಸಾಮಾನ್ಯವಾಗಿದೆ. ಉತ್ತಮ ಇಳುವರಿ ಬೆಳೆ ಬೆಳೆಯಬೇಕು ಎಂದು ವರುಣನನ್ನು ನಂಬಿ ರೈತ ಭೂಮಿಗೆ ಬೀಜ ಬಿತ್ತಿ ಮಳೆ ದಾರಿ ಕಾದು ಬೆಳೆ ಕಳೆದುಕೊಳ್ಳುತ್ತಿರುವುದು ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ. ಈ ವಿಷಮ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬಂದ ದೇಶಪಾಂಡೆ ಫೌಂಡೇಶನ್ ಸೂಕ್ತ ಮಾಹಿತಿ ನೀಡುವುದರೊಂದಿಗೆ ಕೃಷಿಹೊಂಡ ನಿರ್ಮಿಸಿಕೊಡುವ ಮೂಲಕ ಅನ್ನದಾತರ ಕೈ ಹಿಡಿದಿದೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ 38 ವರ್ಷದ ರೈತ ವಿರೇಶ ಲೋಕಾಪುರಮಠ ಅವರು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ತಮ್ಮ 9.5 ಎಕರೆ ಜಮೀನಿನಲ್ಲಿ ಕೃಷಿ ಬದುಕು ಆರಂಭಿಸಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ವೇಳೆ ದೇಶಪಾಂಡೆ ಫೌಂಡೇಶನ್ ವತಿಯಿಂದ ತಮ್ಮ ಹೊಲದ ಒಂದು ಬದಿಯಲ್ಲಿ 100 ಅಡಿ ಉದ್ದ 100 ಅಡಿ ಅಗಲ 10 ಅಡಿ ಆಳದ ಕೃಷಿ ಹೊಂಡ ನಿರ್ಮಿಕೊಳ್ಳುವ ಮೂಲಕ ಸದ್ಯ ಮಾದರಿ ಕೃಷಿಕರಾಗಿ ಬದುಕು ನಡೆಸುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
ಕೃಪಿಹೊಂಡ ನಿರ್ಮಿಸಿಕೊಳ್ಳುವ ಮೊದಲು ಹೆಸರು, ಕಡಲೆ, ಗೋಧಿ ಬೆಳೆದು ವಾರ್ಷಿಕ 1 ಲಕ್ಷದ ವರೆಗೆ ಆದಾಯ ಗಳಿಸುತ್ತಿದ್ದ ಇವರು ಈಗ ಕೃಷಿಹೊಂಡ ನಿರ್ಮಿಸಿಕೊಳ್ಳುವ ಮೂಲಕ ಹತ್ತಿ, ಗೋಧಿ, ಕಡಲೆ, ಈರುಳ್ಳಿ, ಸೋಯಾಬಿನ್ ಹಾಗೂ ಔಷಧಿ ಬೆಳೆ ಶತಾವರಿ ಬೆಳೆಯುವ ಮೂಲಕ ವಾರ್ಷಿಕ 3.5 ಲಕ್ಷದ ಆದಾಯಗಳಿಸುತ್ತಿದ್ದಾರೆ. ಜೊತೆಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಮಳೆಯಾಶ್ರಿತ ಭೂಮಿಯಲ್ಲಿ ರೈತ ದೇಶಪಾಂಡೆ ಫೌಂಡೇಶನ್ ವತಿಯಿಂದ ನಿರ್ಮಿಸಿಕೊಂಡ ಕೃಷಿಹೊಂಡದಲ್ಲಿ ಮಳೆ ನೀರು ಸಂಗ್ರಹಿಸಿಕೊಳ್ಳುವ ಮೂಲಕ ಉತ್ತಮ ಇಳುವರಿ ಬೆಳೆ ಬೆಳೆದು ವ್ಯವಸ್ಥಿತ ಜೀವನ ನಡೆಸುತ್ತಿದ್ದಾರೆ.
Kshetra Samachara
19/02/2021 08:54 pm