ಚಾಮರಾಜನಗರ : ಕೋವಿಡ್ ಲಸಿಕೆ ಪಡೆದಿದ್ದ ನೋಡಲ್ ಅಧಿಕಾರಿ ಸೇರಿ ಜಿಲ್ಲಾಸ್ಪತ್ರೆಯ ಐವರು ವೈದ್ಯರಿಗೆ ಕೊರೋನಾ ದೃಢಪಟ್ಟಿದೆ. ಆದರೆ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಲು ಲಸಿಕೆ ಪಡೆದ ಬಳಿಕ ನಾಲ್ಕರಿಂದ ಐದು ವಾರಗಳಷ್ಟು ಕಾಲಾವಕಾಶ ಬೇಕು. ಆದ್ದರಿಂದ ಜನ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬಹುದು ಎಂದು ಡಿಎಚ್ಒ ಎಂ.ಸಿ.ರವಿ ಸ್ಪಷ್ಟಪಡಿಸಿದ್ದಾರೆ.
ಲಸಿಕೆ ಪಡೆದ ಬಳಿಕ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಲು ಕನಿಷ್ಠ ನಾಲ್ಕರಿಂದ ಐದು ವಾರ ಬೇಕು. ಅಲ್ಲಿವರೆಗೆ ಲಸಿಕೆ ಪಡೆದವರು ಜಾಗ್ರತೆಯಿಂದರಬೇಕು. ಸದ್ಯ ಸೋಂಕು ದೃಢಪಟ್ಟ ಐವರು ವೈದ್ಯರಲ್ಲಿ ಮೂವರು ಕೋವ್ಯಾಕ್ಸಿನ್ ಹಾಗೂ ಇಬ್ಬರು ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು. ಇವರಲ್ಲಿ ಒಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಹೋಮ್ ಐಸೋಲೇಷನ್ನಲ್ಲಿದ್ದಾರೆ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ನಾವು ಮೊದಲ ಡೋಸ್ ಅನ್ನಷ್ಟೇ ಪಡೆದಿದ್ದೇವೆ. ಆದರೆ, ಎರಡನೇ ಡೋಸ್ ಪಡೆದ ಬಳಿಕವಷ್ಟೇ ಲಸಿಕೆ ಪರಿಣಾಮಕಾರಿಯಾಗುತ್ತದೆ. ಒಂದೇ ಡೋಸ್ ಪಡೆದವರು, ತಮಗೆ ಕೋವಿಡ್ ಬರುವುದಿಲ್ಲ ಎಂದು ಮೈಮರೆಯುವಂತಿಲ್ಲ ಎಂದಿದ್ದಾರೆ ಕೋವಿಡ್ ನೋಡಲ್ ಅಧಿಕಾರಿಯೂ ಆಗಿರುವ ಡಾ. ಮಹೇಶ್. ಆರಂಭದ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ಆದರೆ ಆಗ ಬರದ ಕೊರೋನಾ ಈಗ ಬಂದಿದ್ದು, ನಮಗೂ ಒಂದು ರೀತಿ ಬೇಸರ ತರಿಸಿದೆ. ಸದ್ಯ ನಾವು ಆರೋಗ್ಯವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಆತಂಕ ಬೇಡ
ಲಸಿಕೆ ಪಡೆದ ಒಂದೇ ವಾರದಲ್ಲಿ ಈ ರೀತಿಯಾಗಿದೆ. ಇವರಿಗೆ ಕೋವಿಡ್ ಲಕ್ಷಣಗಳಿದಿದ್ದರಿಂದ ಪರೀಕ್ಷೆಗೆ ಒಳಗಾದಾಗ ಸೋಂಕು ದೃಢಪಟ್ಟಿದೆ. ಲಸಿಕೆ ಪಡೆದ ಬಳಿಕವೂ ಈ ವೈದ್ಯರು ಕರ್ತವ್ಯದಲ್ಲಿದ್ದ ಕಾರಣ ಈ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
PublicNext
31/01/2021 10:09 am