ಬೆಂಗಳೂರು: ಕೊರೊನಾ ಮೂರನೇ ಅಲೆ ಮುನ್ಸೂಚನೆ ನಡುವೆಯೂ ಸಭೆ- ಸಮಾರಂಭಗಳಲ್ಲಿ ಜನರು ಸೇರುತ್ತಿದ್ದಾರೆ. ಇತ್ತ ಸಾಲು ಸಾಲು ಹಬ್ಬಗಳಿರುವ ಹಿನ್ನೆಲೆ ಹೂವು ಹಣ್ಣು ಖರೀದಿಸಲು ಮಾರುಕಟ್ಟೆಯಲ್ಲಿ ಜನ ಜಮಾಯಿಸುತ್ತಿದ್ದಾರೆ. ಹೀಗಾಗಿ ಮಾರ್ಕೆಟ್ಗಳಲ್ಲಿ ಸೋಂಕನ್ನು ನಿಯಂತ್ರಿಸಲು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
ಮಾರ್ಗಸೂಚಿಗಳು ಏನು.?:
* ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಉತ್ತೇಜಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಪಾಲಿಕೆಯ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ವಾಹನ ಬಳಸಿಕೊಂಡು ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಕೋವಿಡ್-19 ಸೊಂಕು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ಕಛೇರಿಯಿಂದ ನೀಡಲಾಗಿರುವ ಸಂದೇಶ / ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸುವುದು.
* ಮುಖ್ಯ ಮಾರ್ಷಲ್ರವರು ಈಗಾಗಲೇ ಪಾಲಿಕೆಯ ಎಂಟು ವಲಯ ಮಟ್ಟದಲ್ಲಿ ಮಾರ್ಷಲ್ಗಳಿಗೆ ನಿಯೋಜಿಸಿರುವ ಗಸ್ತು ವಾಹನಗಳನ್ನು ಬಳಸಿಕೊಂಡು ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಕೋವಿಡ್-19 ಸೊಂಕು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ಕಛೇರಿಯಿಂದ ನೀಡಲಾಗಿರುವ ಸಂದೇಶ / ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸುವುದರ ಬಗ್ಗೆ ಕ್ರಮವಹಿಸುವುದು.
* ಮಾಸ್ಕ್ ಧರಿಸುವ ಕ್ರಮವು ಕೋವಿಡ್-19 ತಡೆಗಟ್ಟುವ ಅತ್ಯಂತ ಪ್ರಮುಖ ಕ್ರಮವಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ 250 ರೂ. ದಂಡವನ್ನು ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ವಿಧಿಸುವುದನ್ನು ಕಡ್ಡಾಯವಾಗಿ ಜಾರಿಗೊಳಿಸುವುದು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾರ್ಷಲ್ಗಳು ಹಾಗೂ ಹಿರಿಯ ಆರೋಗ್ಯ ಪರಿವೀಕ್ಷಕರುಗಳು / ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಗತ್ಯ ಕ್ರಮವಹಿಸುವುದು ಹಾಗೂ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸುವ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ 250 ರೂ. ದಂಡವನ್ನು ವಿಧಿಸುವುದು.
* ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಮಾಲ್ಗಳ ಮಾಲೀಕರು ತಾವು ಸೇರಿದಂತೆ ತಮ್ಮ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್-19 ಕನಿಷ್ಠ ಮೊದಲನೇ ಡೋಸ್ ಲಸಿಕೆ ಪಡೆದಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು.
* ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಮಾಲ್ಗಳ ಮಾಲೀಕರುಗಳು ತಮ್ಮ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಗಮನಿಸುವುದು.
* ಮಾರ್ಷಲ್ಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಂಗಡಿಗಳು, ರೆಸ್ಟೋರೆಂಟ್ಗಳು, ಮಾಲ್ಗಳು ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಅನಿರೀಕ್ಷಿತ ಭೇಟಿ ನೀಡಿ ಖಾತರಿಪಡಿಸಿಕೊಳ್ಳುವುದು. ನಿಗಧಿಪಡಿಸಿರುವ ಕರ್ಫ್ಯೂ ಸಮಯದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುವುದು ಮತ್ತು ಯಾವುದೇ ವ್ಯಕ್ತಿ / ಸಂಸ್ಥೆ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ದಂಡದ ಜೊತೆಗೆ ವಿಪತ್ತು ನಿರ್ವಹಣಾ ಕಾಯಿದೆ 2005 ರ ನಿಯಮಾವಳಿಯನ್ವಯ ಕ್ರಮ ಕೈಗೊಳ್ಳುವುದು.
PublicNext
18/08/2021 09:39 pm