ಗದಗ : ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಗಂಗವ್ವ ಆಲೂರ ಅಭಿಪ್ರಾಯಪಟ್ಟರು. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಎಫ್. ಎಂ.ಡಬಾಲಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೇ ಸೀಮಿತರಾಗಬಾರದು. ತಮ್ಮಲ್ಲಿ ಅಡಗಿರುವ ವಿಭಿನ್ನವಾದ ಜ್ಞಾನ, ಕೌಶಲ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ಅವಕಾಶ ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಮಕ್ಕಳಿಗೆ ಕೇವಲ ಪಠ್ಯದಲ್ಲಿನ ಅಭ್ಯಾಸದ ಬಗ್ಗೆ ಪಾಠಬೋಧನೆ ಮಾಡದೆ ಅವರ ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ಪಠ್ಯೇತರ ಚಟುವಟಿಕೆಗಳ ಅಧ್ಯಯನ ಮಾಡುವಂತಾಗಬೇಕು. ಅಂದಾಗ ಮಕ್ಕಳಲ್ಲಿನ ಕಲೆ ಸಾಹಿತ್ಯಭಿಮಾನವನ್ನು ಹೊರಗೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ನಡೆಯುವ ಪ್ರತಿಭಾ ಕಾರಂಜಿಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಬಿಇಒ ಜಿ.ಎಲ್.ಮುಂದಿನಮನಿ ಮಾತನಾಡಿ, ಪ್ರತಿಭೆಗಳ ಅನಾವರಣಕ್ಕೆಂದೆ ನಡೆಯುತ್ತಿರುವ ಈ ಪ್ರತಿಭಾ ಕಾರಂಜಿಗಳು ಮಕ್ಕಳಲ್ಲಿ ಪಠ್ಯೇತರ ಆಸಕ್ತಿಯನ್ನು ಹೆಚ್ಚುಸುತ್ತವೆ. ಪ್ರಸ್ತುತವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ನಡೆಯುತ್ತಿದ್ದು, ಕಿರಿಯ ಹಂತದಲ್ಲಿ 272, ಹಿರಿಯ ಹಂತದಲ್ಲಿ 323, ಪ್ರೌಢ ಹಂತದ 229 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 817 ಸ್ಪರ್ಧಾಳುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಇಲಾಖೆಯ ಎಚ್.ಎಸ್.ದ್ಯಾಮನಗೌಡ, ಎಂ.ಕೆ.ಲಮಾಣಿ, ಶರಣಬಸನಗೌಡ ಪಾಟೀಲ, ಬಿ.ಎಸ್.ಭಜಂತ್ರಿ, ಪಪಂ ಸದಸ್ಯ ದೀಪು ಕಪ್ಪತ್ತನವರ, ಫಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಎಚ್.ಆರ್.ಬೆನಹಾಳ, ಕಳಸಾಪುರ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
01/10/2022 01:10 pm