ಗದಗ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮ ಹೇಳಿದರು.
ತಾಲೂಕಿನ ಮಾಢಳ್ಳಿ ಮತ್ತು ಗೊಜನೂರ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಕರವಸೂಲಾತಿ ಮಾಸಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಎಲ್ಲ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಕರವಸೂಲಿಗಾರರು ಸಭೆ ನಡೆಸಿ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಶೇ.100ರಷ್ಟು ಕರವಸೂಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮನೆ ಮನೆ ಭೇಟಿ ಮತ್ತು ಜಾಥಾ ಕಾರ್ಯಕ್ರಮ ಮೂಲಕ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದ್ದು, ಅದರಂತೆ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಕರವಸೂಲಿಗಾರರು ಪ್ರಗತಿ ಸಾಧಿಸಲು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಹಂತಗಳಲ್ಲಿ ಮನೆ ಮನೆಗೆ ತೆರಳಿ ಕರವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಸಹ ಸ್ಪಂದಿಸುತ್ತಿದ್ದಾರೆ. ಇದರಿಂದ ಗ್ರಾಪಂ ಕರವಸೂಲಿ ಗುರಿ ಸಾಧನೆಯಾಗಲಿದೆ ಎಂಬ ಆಶಭಾವನೆ ಇದೆ ಎಂದರು.
ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿಯ ಕರಪರಿಷ್ಕರಣೆ ಬಗ್ಗೆ ಮತ್ತು ಕರವಸೂಲಾತಿ ಬಗ್ಗೆ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದ್ದು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ತೆರಿಗೆ ವಿಧಿಸುವುದು, ತೆರಿಗೆ ಪರಿಷ್ಕರಿಸುವುದು ಮತ್ತು ತೆರಿಗೆ ವಸೂಲಿ ಮಾಡುವ ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳು ಅಭಿವೃದ್ದಿ ಹೊಂದಬೇಕಾದರೆ ಪಂಚಾಯಿತಿ ಹಣಕಾಸಿನಲ್ಲಿ ಸಧೃಡವಾಗಿರುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಡಿ.ಡಿ. ಹಂದಿಗನೂರ, ಮಂಜುನಾಥ ಮಲ್ಲೂರ, ಗ್ರಾಪಂ ಕಾರ್ಯದರ್ಶಿಗಳಾದ ನವ್ಯ ಗಾವಡಿ, ಸೋಮು ಲಮಾಣಿ ಗ್ರಾಪಂ ಕರವಸೂಲಿಗಾರ ಎಸ್.ವಿ. ಪಾಟೀಲ, ಸಿ.ಎನ್. ನಾಡಗೇರ, ಪ್ರಕಾಶ ಅಂಗಡಿ, ನಿಂಗರಾಜ ಬಾಗವಾಡ ಇತರರು ಇದ್ದರು.
Kshetra Samachara
09/12/2024 05:12 pm