ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ತಲಾ 20 ವರ್ಷ ಜೈಲು, 50 ಸಾವಿರ ರೂ.ದಂಡ ವಿಧಿಸಿ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿಯಾಗುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 2016ರಲ್ಲಿ ನರಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ನರಗುಂದ ದೇಸಾಯಿಬಾವಿ ಓಣಿ ನಿವಾಸಿಗಳಾದ ಮೋದಿನ್‌ಸಾಬ್ ತೆಗ್ಗಿನಮನಿ, ಮಕ್ತುಂಸಾಬ್ ತೆಗ್ಗಿನಮನಿ ಅತ್ಯಾಚಾರ ನಡೆಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣ ಹಿನ್ನೆಲೆ:
ತಾಯಿ ಕಳೆದುಕೊಂಡ ಬಾಲಕಿ ಧಾರವಾಡದ ಪರಿಚಿತರ ಮನೆಯಲ್ಲಿದ್ದಳು. ಮಲತಾಯಿ-ತಂದೆ ಮಂಗಳೂರಿಗೆ ದುಡಿಯಲು ಹೋಗಿದ್ದರು. ಆದರೆ ಬಾಲಕಿಗೆ ಧಾರವಾಡದಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೆ ಮತ್ತೆ ನರಗುಂದಕ್ಕೆ ಬಂದಾಗ, ಆರೋಪಿಗಳ ತಾಯಿ ಜೈತುನಬಿ ತೆಗ್ಗಿನಮನಿ ಆ ಬಾಲಕಿಯನ್ನು ಬಲವಂತವಾಗಿ ಬಂಧಿಸಿಟ್ಟಿದ್ದಳು. ಈ ವೇಳೆ ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿ ಆಗುವಂತೆ ಮಾಡಿದ್ದರು. ಅಂತಿಮವಾಗಿ 2016 ಮೇ 4ರಂದು ಅಪ್ರಾಪ್ತ ಹೆಣ್ಣು ಮಗುವಿಗೆ ಜನ್ಮನೀಡಿ, ಪೋಕ್ಸೋ ಅಡಿ ದೂರು ದಾಖಲಿಸಿದ್ದಳು. ಪ್ರಕರಣದ ತನಿಖೆ ನಡೆಸಿದ ಅಂದಿನ ಸಿಪಿಐ ರಮಾಕಾಂತ ಎಚ್.ವೈ. ಮೂವರು ಆರೋಪಿಗಳನ್ನು ಬಂಧಿಸಿದ್ದರು. 2016 ಆಗಸ್ಟ್ 20 ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇಬ್ಬರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಎ.ಯು. ಹಿರೇಮಠ ಸರಕಾರದ ಪರವಾಗಿ ವಾದ ಮಂಡಿಸಿದ್ದರು.
PublicNext
24/09/2022 10:55 am