ಮುಂಡರಗಿ: ಮಗುವಿನ ಮೇಲೆ ಬೀದಿ ನಾಯಿಯೊಂದು ರಾಕ್ಷಸಿ ರೂಪದಲ್ಲಿ ಭೀಕರವಾಗಿ ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ 20ನೇ ವಾರ್ಡ್ (ಶಾದಿಮಹಲ್ ಬಳಿ)ನಲ್ಲಿ ನಡೆದಿದೆ.
ಎರಡೂವರೆ ವರ್ಷದ ರುದ್ರೇಶ್ ವೀರೇಶ್ ಕಾಳೆ ಅನ್ನೋ ಮಗು ಹಾಗೂ ಇತರೆ ಮಕ್ಕಳು ಇಂದು ಬೆಳಿಗ್ಗೆ ಮನೆ ಮುಂದೆ ಆಟವಾಡುವಾಗ ಏಕಾಏಕಿ ಬೀದಿನಾಯಿಯೊಂದು ಮಗುವಿನ ಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ ಮಾಡಿದೆ. ಪರಿಣಾಮ ಮಗುವಿನ ಮುಖ, ಹಣೆ, ಬಾಯಿ, ವಸಡು ಮತ್ತು ಹಲ್ಲುಗಳು ಕಿತ್ತು ಹೊರಬಂದಿದ್ದು, ಸಾಕಷ್ಟು ರಕ್ತಸ್ರಾವವಾಗಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಗದಗ ಜೀಮ್ಸ್ ಆಸ್ಪತ್ರೆಗೆ ಮಗುವನ್ನ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ವಾರ್ಡ್‌ನಲ್ಲಿ ಬೀದಿನಾಯಿಗಳ ದಾಳಿ ಇದೇ ಮೊದಲೇನಲ್ಲ. ಈಗಾಗಲೇ ಸಾಕಷ್ಟು ಬಾರಿ ಶ್ವಾನಗಳ ದಾಳಿಗೆ ಹಲವಾರು ಮಕ್ಕಳು ಬಲಿಯಾಗಿದ್ದು, ಸಂಬಂಧಪಟ್ಟ ಪುರಸಭೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
20ನೇ ವಾರ್ಡ್ ಅಷ್ಟೇ ಅಲ್ಲದೇ ಇಡೀ ಮುಂಡರಗಿ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾದರೆ ಸಾಕು ವಯೋವೃದ್ಧರು, ಮಕ್ಕಳು, ಮಹಿಳೆಯರು ಹೊರಬಾರದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಮತ್ತೊಂದು ಕಾರಣ ಪಟ್ಟಣದ ಮಧ್ಯಭಾಗದಲ್ಲಿ ಮಾಂಸದ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟಿವೆ. ಇದರಿಂದಾಗಿ ಆಹಾರದ ಆಸೆಗಾಗಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಪಾದಚಾರಿಗಳನ್ನ, ವಾಹನ ಸವಾರರನ್ನ ಹಾಗೂ ವಯೋವೃದ್ಧರನ್ನ ಬೆಂಬಿಡದೇ ಬೆನ್ನಟ್ಟಿ ದಾಳಿ ಮಾಡುತ್ತಿವೆ. ಹೀಗಾಗಿ ಮೊದಲು ಪಟ್ಟಣದ ಹೃದಯ ಭಾಗದಲ್ಲಿರುವ ಮಾಂಸದ ಅಂಗಡಿಗಳನ್ನ ಪ್ರತ್ಯೇಕವಾಗಿ ಒಂದೇ ಕಡೆ ಮಾರುಕಟ್ಟೆ ಸ್ಥಾಪಿಸಿ, ಅಲ್ಲಿಗೆ ಸ್ಥಳಾಂತರಿಸಬೇಕು. ಅಂದಾಗ ಮಾತ್ರ ಬೀದಿನಾಯಿಗಳಿಗೆ ನಿಯಂತ್ರಣ ಹಾಕಿದಂತಾಗುತ್ತದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಇನ್ನಾದರೂ ಪುರಸಭೆ ನಿದ್ದೆಯಿಂದ ಎದ್ದು, ಪಟ್ಟಣದ ಜನರಿಗೆ ಮಾರಕವಾಗಿರೋ ಬೀದಿನಾಯಿಗಳ ಹಾವಳಿಯನ್ನ ನಿಯಂತ್ರಿಸುತ್ತಾ? ಅನ್ನೋದನ್ನ ಕಾದು ನೋಡಬೇಕಾಗಿದೆ.
PublicNext
08/12/2024 02:08 pm