ದಸರಾ ಬಂದ್ರೆ ಸಾಕು ಕುಂದಾನಗರಿ ಬೆಳಗಾವಿಯ ಗಲ್ಲಿ ಗಲ್ಲಿಗಳೆಲ್ಲವೂ ಸಂಪೂರ್ಣ ಕೇಸರಿಮಯವಾಗಿರುತ್ತೆ. ಬೆಳಗ್ಗೆ ಐದು ಗಂಟೆಗೇ ಎದ್ದು ಹೆಣ್ಣುಮಕ್ಕಳು ಮನೆ ಎದುರು ರಂಗೋಲಿ ಬಿಡಿಸಿ, ಹೂವಿನ ಅಲಂಕಾರ ಮಾಡಿ, ಮಕ್ಕಳಿಗೆ ಛತ್ರಪತಿ ಶಿವಾಜಿ ಮಹಾರಾಜ, ಜೀಜಾ ಮಾತಾ ಸೇರಿದಂತೆ ದೇಶಭಕ್ತರ ವೇಷಭೂಷಣ ತೊಡಿಸಿ ಓಟದಲ್ಲಿ ಭಾಗಿಯಾಗ್ತಾರೆ. ಅಷ್ಟಕ್ಕೂ 9 ದಿನಗಳ ಕಾಲ ನಡೆಯುವ ಈ ಅದ್ಧೂರಿ ದುರ್ಗಾಮಾತಾ ದೌಡ್ ವಿಶೇಷತೆ ಏನು ಗೊತ್ತಾ? ಈ ಸ್ಟೋರಿ ನೋಡಿ.
ಹೀಗೆ ೯ ದಿನಗಳ ಕಾಲ ನವರಾತ್ರಿ ಅಂಗವಾಗಿ ಬೆಳ್ಳಂಬೆಳಗ್ಗೆ ಮನೆ ಎದುರು ಕಲರ್‌ಫುಲ್ ರಂಗೋಲಿ ಬಿಡಿಸಿ, ಪುಷ್ಪಾಲಂಕಾರ ಮಾಡುತ್ತಿರುವ ಮಹಿಳೆಯರು. ಜೀಜಾ ಮಾತಾ, ಛತ್ರಪತಿ ಶಿವಾಜಿ ಮಹಾರಾಜರ ವೇಷ ಭೂಷಣ ತೊಟ್ಟು ಸಂಭ್ರಮಿಸುತ್ತಿರುವ ಚಿಣ್ಣರು. ಕೇಸರಿ ಪೇಟ ತೊಟ್ಟು ಕೇಸರಿ ಶಾಲು ಧರಿಸಿ ಓಟದಲ್ಲಿ ಭಾಗಿಯಾಗಿರುವ ಸಹಸ್ರಾರು ಯುವಸಮೂಹ. ಕೈಯಲ್ಲಿ ಹಿಡಿದ ಕೇಸರಿ ಧ್ವಜಕ್ಕೆ ಭಕ್ತಿಪೂರ್ವಕವಾಗಿ ಮಾಲಾರ್ಪಣೆ ಮಾಡಿ ನಮಿಸುತ್ತಿರುವ ಭಕ್ತ ವೃಂದ. ಭಾರತ್ ಮಾತಾ ಕೀ ಜೈ. ವೀರರಾಣಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜಗೆ ಜೈಕಾರ. ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕುಂದಾನಗರಿ ಬೆಳಗಾವಿಯಲ್ಲಿ. ಹೌದು ಗಡಿಜಿಲ್ಲೆ ಬೆಳಗಾವಿಯಲ್ಲಿ ಹೀಗೆ ದುರ್ಗಾಧೌಡ ವೈಭವೋಪೇತ ದಸರಾ ಆಚರಣೆ ಮಾಡಲಾಗುತ್ತೆ.
ಈ ದುರ್ಗಾಮಾತಾ ದೌಡ್ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಮಹಾರಾಷ್ಟ್ರದ ಹಿಂದೂ ಮುಖಂಡ ಸಂಭಾಜಿರಾವ್ ಬಿಡೆ. ಸಂಭಾಜಿರಾವ ಬಿಡೆ ಸಂಸ್ಥಾಪಿಸಿರುವ ಶಿವಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆ ವತಿಯಿಂದ ಮಹಾರಾಷ್ಟ್ರದ ಸಾಂಗಲಿಯಲ್ಲಿ ಕಳೆದ 35 ವರ್ಷಗಳ ಹಿಂದೆ ದುರ್ಗಾಮಾತಾ ದೌಡ್‌ಗೆ ಚಾಲನೆ ನೀಡಲಾಗಿತ್ತು. ಇದಾದ ಹತ್ತು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಚಾಲನೆ ನೀಡಲಾಯಿತು. ಕಳೆದ 25 ವರ್ಷಗಳಿಂದ ಬೆಳಗಾವಿಯಲ್ಲಿ ಅದ್ಧೂರಿಯಾಗಿ ದುರ್ಗಾಮಾತಾ ದೌಡ್ ನಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಓಟದಲ್ಲಿ ಭಾಗಿಯಾಗುವರ ಸಂಖ್ಯೆ ಹೆಚ್ಚಾಗುತ್ತಿದೆ.
ಪ್ರತಿದಿನ ಕೆಲವು ಏರಿಯಾಗಳಂತೆ ಒಂಬತ್ತು ದಿನ ಇಡೀ ಬೆಳಗಾವಿ ನಗರದ ಪ್ರತಿಯೊಂದ ಏರಿಯಾಗಳಲ್ಲೂ ಈ ದುರ್ಗಾ ಮಾತಾ ದೌಡ ಕಾರ್ಯಕ್ರಮ ನಡೆಯುತ್ತೆ. ಬರೀ ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲೂ ಕೂಡ ಇದೇ ಮಾದರಿಯಲ್ಲಿ ಜನರು ದುರ್ಗಾಮಾತಾ ದೌಡ ಆಚರಣೆಯನ್ನ ಮಾಡಿಕೊಂಡು ಬರ್ತಿದ್ದಾರೆ.
ಪ್ರತಿದಿನ ಸುಮಾರು 5-10 ಕಿ.ಮೀ ದೌಡ್ ಆದ್ರೇ ಇಂದು 17ಕಿಮೀ ದೌಡ್ ನಡೆದಿದ್ದು ವಿಶೇಷವಾಗಿತ್ತು. ಇನ್ನೂ ಎರಡು ವರ್ಷದ ಬಳಿಕ ದೌಡ್ ಕಾರ್ಯಕ್ರಮ ಮಾಡ್ತಿದ್ದು ರಾತ್ರಿಯಿಂದಲೇ ಸಿದ್ದತೆ ಮಾಡಿಕೊಂಡು ಬೆಳಗ್ಗೆ ರಂಗೋಲಿ ಹಾಕಿ ಹೂಗಳಿಂದ ಸಿಂಗಾರ ಮಾಡಿ ದೌಡ್ ನಲ್ಲಿ ಭಾಗಿಯಾಗುತ್ತೇವೆ ಅಂತಾ ಮಹಿಳೆಯರು ಹೇಳುತ್ತಾರೆ.
PublicNext
03/10/2022 12:05 pm