ಬೆಳಗಾವಿ: ಮಕ್ಕಳು ತಾಯಿಯೇ ದೇವರು ಅಂತಾ ಪೂಜೆ ಮಾಡುವ ಒಂದು ಕಾಲ ಇತ್ತು. ಮದುವೆ ಆದ ಮೇಲೆ ಪತ್ನಿಯೇ ಎಲ್ಲಾ ನನಗೆ ಅನ್ನೋ ಹಾಗೇ ಬಂದಿದೆ. ಹೆಂಡ್ತಿ ಮಾತು ಕೇಳಿ ಹೆತ್ತವ್ವಳನ್ನು ದೂರ ಮಾಡಿ ಆರಾಮಾಗಿರೋ ಪಾಪಿ ಮಗ ಒಂದು ಕಡೆಯಾದ್ರೆ, ಎಲ್ಲರೂ ಇದ್ದು ಇಲ್ಲದಂತೆ ತಾಯಿಯ ಕಣ್ಣೀರಿನ ಕಥೆ ಇದು..
ಒಂಬತ್ತು ತಿಂಗಳು ಹೊತ್ತು, ಹೆತ್ತು, ಬೆಳೆಸಿ, ಓದಿಸಿ ನೌಕರಿ ಕೊಡಿಸಿದ ಹೆತ್ತವ್ವಳನ್ನೇ ಬೀದಿಗೆ ಬಿಟ್ಟು ಹೆಂಡತಿಯೊಂದಿಗೆ ಹೋದ ಪಾಪಿ ಮಗನ ನೀಚತನದ ಕರಾಳ ಸ್ಟೋರಿ ಇದು.
ನೀವು ನೋಡ್ತಾ ಇರೋ 77 ವರ್ಷದ ಮುಪ್ಪಾಗಿರುವ ಅಜ್ಜಿ. ಇಂದೋ ನಾಳೆಯೋ ಶಿವನ ಪಾದ ಸೇರುವ ದಿನಗಳನ್ನು ಎದುರಿಸುವ ಬಾಳವ್ವ ಎಂಬ ಅಜ್ಜಿಗೆ ಒಬ್ಬನೇ ಒಬ್ಬ ಮಗ. ಅವನು ಕೂಡಾ ಸರಕಾರಿ ನೌಕರಿಯಸ್ಥ. ಬಾಳವ್ವನ ಬಾಳಲ್ಲಿ ಮಗ ನಾಲ್ಕು ವರ್ಷದವನಿರುವಾಗಲೇ ಗಂಡ ಸತ್ತು ಬರಸಿಡಿಲು ಬಡಿದಂಗಾಗಿತ್ತು.
ಯಾವುದಕ್ಕೂ ಅಂಜದೇ, ಅಳುಕದೇ ಬದುಕಿ, ಮಗನನ್ನು ಬಗಲಲ್ಲಿ ಇಟ್ಟುಕೊಂಡು ಬೆಳೆಸಿ, ಓದಿಸಿ ಸರಕಾರಿ ನೌಕರಿ ಕೊಡಿಸಿ ಮಾತನಾಡುವ ಜನರೆದುರು ಸೈ ಎನಿಸಿಕೊಂಡ ಅಜ್ಜಿಗೆ ಈಗ ಮಗನಿಂದ ಅನಾಥಾಶ್ರಮದ ಬದುಕು ಸಿಕ್ಕಿದೆ.
ಪತ್ನಿಯ ಮಾತನ್ನು ಕೇಳಿ ತಾಯಿಯ ಬಳಿಯಿದ್ದ ಆಸ್ತಿ, ಅಂತಸ್ತು, ಬಂಗಾರ ಎಲ್ಲವನ್ನೂ ಕಿತ್ತುಕೊಂಡು ರಾಮತೀರ್ಥದ ಮನೆಯಲ್ಲಿ ತಾಯಿಯೊಬ್ಬಳನ್ನೇ ಬಿಟ್ಟು ಪತ್ನಿಯ ಜೊತೆ ಅರಾಮಾಗಿದ್ದಾನಂತೆ ಆ ಪಾಪಿ ಮಗ.
ಅಜ್ಜಿ ಊಟಕ್ಕೆ..ಔಷಧಕ್ಕೂ ಹಣವಿಲ್ಲದೇ ಬೇರೆಯವರಿಗೆ ಕೈ ಚಾಚುವ ಬಾಳವ್ವನ ಬದುಕು ಈಗ ಅನಾಥಾಶ್ರಮಕ್ಕೆ ಶಿಫ್ಟ್ ಆಗಿದೆ. ಅನಾಥಾಶ್ರಮದಲ್ಲಿ ಇದ್ದರೂ ಕೂಡಾ ಹೆತ್ತ ತಾಯಿ ಮಗನನ್ನು ಹೇಗೆ ಬಿಟ್ಟು ಕೊಡ್ತಾಳೆ ಹೇಳಿ. ನನ್ನ ಮಗ ಎಲ್ಲೇ ಇದ್ದರೂ ಚೆನ್ನಾಗಿರಲಿ ಅಂತಾ ನಗು ನಗುತಾ ಹಾರೈಸುತ್ತಾಳೆ. ಇದಪ್ಪಾ ತಾಯಿಯ ಪ್ರೀತಿ ಅಂದರೆ. ಈಗಲಾದರೂ ಆ ತಾಯಿಯ ಮಾತು ಕೇಳಿ ಮಗ ಬಂದು ತಾಯಿಯನ್ನು ಕರೆದುಕೊಂಡು ಹೋಗ್ತಾನಾ ಕಾದು ನೋಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
PublicNext
02/12/2024 05:09 pm