ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನಾವು ತುಳಿದು ಬೆಳೆಯುವವರಲ್ಲ, ಬೆಳೆದು, ಬೆಳೆಸುವವರು: ಮೂಡಲಗಿ ನೆಲದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅಬ್ಬರ

ಬೆಳಗಾವಿ: ಬೇರೆ ಸಮಾಜಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡದೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ತೆಗೆದುಕೊಂಡೇ ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗಾಗಿ ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ ಆರ್ಥಿಕವಾಗಿ ಶ್ರೀಮಂತವಲ್ಲ, ಆದರೆ ಶ್ರೀಮಂತ ಹೃದಯವಿರುವವರು ನಮ್ಮ ಸಮಾಜದವರು, ಅದನ್ನು ಅರ್ಥ ಮಾಡಿಕೊಳ್ಳಿ, ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ನಮ್ಮ ಸಮಾಜದ ಸಹಾಯ, ಸಹಕಾರ ಪಡೆದುಕೊಂಡು ನಮಗೆ ಮಾತ್ರ ಚಿಪ್ಪು ಕೊಡುತ್ತಾರೆ.

ಮುಖ್ಯಮಂತ್ರಿಗಳು ೨-೩ ಬಾರಿ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದರು. ನಾವು, ಬಸವರಾಜ ಪಾಟೀಲ ಯತ್ನಾಳ ಅವರು ಎಲ್ಲರೂ ಪಾಲ್ಗೊಂಡಿದ್ದೆವು. ಸಭೆಯಲ್ಲಿ ಮುಖ್ಯಮಂತ್ರಿಗಳು ೨ ಎ ಮೀಸಲಾತಿ ನೀಡುವ ಭರವಸೆ ಕೊಟ್ಟಿದ್ದಾರೆ. ಶೀಘ್ರದಲ್ಲಿ ಸರ್ವ ಪಕ್ಷದ ಸಭೆ ಕರೆದು ೨ಎ ಮೀಸಲಾತಿ ನೀಡುವ ನಿರ್ಣಯ ಕೈಗೊಳ್ಳಲಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತೇನೆ ಎಂದರು.

ನಮ್ಮ ಸಮಾಜದವರಿಗೆ ತುಳಿದು ಬೆಳೆಯುವದರಲ್ಲಿ ವಿಶ್ವಾಸವಿಲ್ಲ, ಬೆಳೆದು ಬೆಳಸೋದರಲ್ಲಿ ನಮಗೆ ವಿಶ್ವಾಸ. ಮುಂದೆ ಬಂದರೆ ಹಾಯೋರಲ್ಲ, ಹಿಂದೆ ಬಂದರೆ ಒದೆಯೋರಲ್ಲ, ಹಾಗಂತ ನಮ್ಮನ್ನು ಹಗುರವಾಗಿ ತೆಗೆದುಕೊಳ್ಳಲು ಹೋಗಬೇಡಿ ಎಂದು ಎಚ್ಚರಿಸಿದರು.

ನಮ್ಮ ಪಂಚಮಸಾಲಿ ಸಮಾಜದವರು, ನಾವು ಈ ಕ್ಷೇತ್ರದಲ್ಲಿ ೫೦ ಸಾವಿರ ಸಂಖ್ಯೆ ಇದ್ದೇವೆ, ಆ ಕ್ಷೇತ್ರದಲ್ಲಿ ೪೦ ಸಾವಿರ ಸಂಖ್ಯೆಯಲ್ಲಿದ್ದೇವೆ ಎಂದು ಬರೀ ಲೆಕ್ಕ ಹಾಕುತ್ತೇವೆ, ಆದರೆ ನಾವು ಇನ್ನೂ ಚುರುಕಾಗಿಯೇ ಇಲ್ಲ. ಎಮ್ಮೆ ಕಟ್ಟಿ ಹಾಲು ಕರೆದು ಬೆಣ್ಣೆ ಮಾರಿ, ಮಜ್ಜಿಗೆ ಕುಡಿಯುವ ಬುದ್ದಿ ನಮ್ಮದು. ೪೦, ೫೦, ೭೦ ಸಾವಿರದ ಲೆಕ್ಕದಿಂದ ರಾಜಕಾರಣದಲ್ಲಿ ಗೆಲ್ಲಲು ಆಗುವುದಿಲ್ಲ, ಚೆನ್ನಮ್ಮನಿಗೆ ಒಬ್ಬ ಸಂಗೊಳ್ಳಿ ರಾಯಣ್ಣ ಬೇಕೇಬೇಕು, ಹಾಗೆ ಎಲ್ಲ ವರ್ಗದವರೊಂದಿಗೆ ಪಂಚಮಸಾಲಿ ಸಮಾಜ ಒಳ್ಳೆಯ ಸಂಬಂಧ ಇಟ್ಟುಕೊಂಡಿದೆ. ನಾವು ಬಸವಣ್ಣನ ಕುಲದವರು. ಎಲ್ಲರನ್ನು ಒಡಗೂಡಿ ಮುಂದೆ ಹೋಗುವುದು ನಮ್ಮ ಸಮಾಜದ ಅಂತಃಸತ್ವ. ಬೇರೆ ಸಮಾಜದವರಿಗೆ ಇಷ್ಟು ದಿನ ಸಹಾಯ ಸಹಕಾರ ಮಾಡಿದ್ದೇವೆ, ಪಂಚಮಸಾಲಿಯವರಿಗೆ ಆಶೀರ್ವಾದ ಮಾಡಿ ಎಂದರು.

Edited By :
PublicNext

PublicNext

08/10/2022 11:41 am

Cinque Terre

22.74 K

Cinque Terre

1

ಸಂಬಂಧಿತ ಸುದ್ದಿ