ದೊಡ್ಡಬಳ್ಳಾಪುರ: ಹತ್ಯೆಯಾದ ಯುವಕರ ಕುಟುಂಬಗಳಿಗೆ ಪರಿಹಾರ ತಾರತಮ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿ.ವೈ.ವಿಜಯೇಂದ್ರ, ನಮ್ಮ ಪಕ್ಷದ ಕಾರ್ಯಕರ್ತನ ಹತ್ಯೆಯಾಗಿದೆ. ಆದ್ದರಿಂದ ಪಕ್ಷದ ವತಿಯಿಂದಲೇ ಪರಿಹಾರ ಕೊಟ್ಟಿದ್ದೇವೆ ಎಂದರು.
ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯತ ಸಮಾಜ ಆಯೋಜಿಸಿದ ಶ್ರೀ ಶಿವಕುಮಾರ ಸ್ವಾಮೀಜಿಯವರ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮರ್ಥರಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಏನೆಲ್ಲಾ ನಡೆದಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಪ್ರವೀಣ್ ಹತ್ಯೆಯಿಂದ ಪಕ್ಷದ ಪ್ರತಿ ಕಾರ್ಯಕರ್ತರಿಗೂ ನೋವಾಗಿದೆ. ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎನ್ಐಎ ತನಿಖೆಗೆ ಹಸ್ತಾಂತರಿಸಿರುವುದು ಸ್ವಾಗತಾರ್ಹ ಎಂದರು.
ಸೂಕ್ಷ್ಮ ವಿಚಾರದಲ್ಲಿ ಕಾಂಗ್ರೆಸ್ ನವರು ಸಣ್ಣತನ ತೋರುತ್ತಿರುವುದು ಸರಿಯಲ್ಲ. ಪ್ರವೀಣ್ ಹತ್ಯೆ ದಿನವೇ ಮುಸ್ಲಿಂ ಯುವಕನ ಹತ್ಯೆ ನಡೆದರೂ ಸರ್ಕಾರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಿದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಕಾರ್ಯಕರ್ತನಾಗಿದ್ದರಿಂದ ಪ್ರವೀಣ್ ಕುಟುಂಬಕ್ಕೆ ಪಕ್ಷದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಸರ್ಕಾರದಿಂದ ಪರಿಹಾರ ನೀಡಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.
ಮುಖ್ಯಮಂತ್ರಿ ಅವರಿಗೆ ಹಿಂದು- ಮುಸ್ಲಿಂ ಎಂಬ ಬೇಧವಿಲ್ಲ. ಸಮಯದ ಅಭಾವದಿಂದಾಗಿ ಮುಸ್ಲಿಂ ಕುಟುಂಬವನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದರು.
PublicNext
30/07/2022 01:40 pm