ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ 31 ಜಿಲ್ಲೆಯ 90 ಉಪ ನೋಂದಣಿ ಅಧಿಕಾರಿಗಳನ್ನು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಉಪ ನೋಂದಣಾಧಿಕಾರಿಗಳ ವರ್ಗಾವಣೆಯಲ್ಲಿ ಹಣ ವಹಿವಾಟು ಸೇರಿದಂತೆ ಭ್ರಷ್ಟಾಚಾರದ ಬಗ್ಗೆ ಈ ಹಿಂದೆ ಹಲವು ಬಾರಿ ದೂರುಗಳು ಕೇಳಿಬಂದಿದ್ದವು. ವರ್ಗಾವಣೆ ದಂಧೆಯ ಬಗ್ಗೆ ಹಲವು ನಾಯಕರು ಸದನದಲ್ಲೇ ಧ್ವನಿ ಎತ್ತಿದ್ದರು. ಹೀಗಾಗಿ ಈ ಎಲ್ಲಾ ಅವ್ಯವಹಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ವರ್ಗಾವಣೆಯಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವ ಸಲುವಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಾಲಿನಿಂದ ಉಪ-ನೋಂದಣಾಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ರಾಜ್ಯದ 31 ಜಿಲ್ಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಿ ಕಚೇರಿಗಳಲ್ಲಿ ನೋಂದಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 90ಜನ ಕೇಂದ್ರಸ್ಥಾನ ಸಹಾಯಕರು/ ಹಿರಿಯ ಉಪನೋಂದಣಾಧಿಕಾರಿಗಳನ್ನು ಇಂದು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಈ ವರ್ಗಾವಣೆ ಅವಧಿಯಲ್ಲಿ ಒಂದು ರೂಪಾಯಿ ಸಹ ಹಣ ವಹಿವಾಟು ನಡೆದಿರುವ ಬಗ್ಗೆ ದೂರುಗಳು ಬಂದಿಲ್ಲ ಎಂಬುದು ಉಲ್ಲೇಖಾರ್ಹ.
ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರ ನೇತೃತ್ವದಲ್ಲಿ ನವೆಂಬರ್ 04ರಿಂದಲೇ ಕೌನ್ಸೆಲಿಂಗ್ ನಡೆಸಲಾಗಿತ್ತು. ಈ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಸ್ವ-ಇಚ್ಛೆಯಿಂದ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆಯನ್ನು ಆಧರಿಸಿ ವರ್ಗಾಯಿಸಿ ಆದೇಶಿಸಲಾಗಿದೆ.
Kshetra Samachara
12/12/2024 04:12 pm