ದೊಡ್ಡಬಳ್ಳಾಪುರ: ಸಮಾಜ ಸುಧಾರಕರು ಮತ್ತು ಕವಿಗಳನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥನನ್ನು ಈ ಕೂಡಲೇ ಬಂಧಿಸಬೇಕು ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲ ರುದ್ರರಾಧ್ಯ, ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಅಧಿಕಾರದ ಹಪಹಪಿಗೆ ಬಿದ್ದು ಸಂಘ ಪರಿವಾರ ಹಿಡನ್ ಅಜೆಂಡಾ ಜಾರಿ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಬರಗೂರು ಅವರ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ 170 ಜನರು ಕಾರ್ಯ ನಿರ್ವಹಿಸಿದ್ದರು, ರೋಹಿತ್ ಚಕ್ರತೀರ್ಥನ ಸಮಿತಿಯಲ್ಲಿ ಬರೀ ಹತ್ತು ಜನರು ಅದರಲ್ಲೂ ಒಂಬತ್ತು ಜನ ಒಂದೇ ಜಾತಿಯ ಜನರು ಇದ್ದಾರೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂದು ಅಸಮಾಧಾನ ಹೊರ ಹಾಕಿದರು.
ದಲಿತ ಮುಖಂಡ ಗೂಳ್ಯ ಹನುಮಣ್ಣ ಮಾತನಾಡಿ, ನಮ್ಮ ನಾಡ ಧ್ವಜವನ್ನು ಒಳ ಉಡುಪಿಗೆ ಹೋಲಿಕೆ ಮಾಡಿದರೂ, ರಾಷ್ಟ್ರ ಕವಿ ಕುವೆಂಪು ಅವರಿಗೆ ಅವಮಾನ ಮಾಡಿದರೂ ಕನ್ನಡ ಪರ ಹೋರಾಟಗಾರು ಬೀದಿಗಿಳಿಯದಿರುವುದು ದುರಂತ ಎಂದರು.
ತಾಲ್ಲೂಕು ವ್ಯವಸಾಯೋತ್ಫನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಅಂಜನಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ಬಗ್ಗೆ ಸಂವಿಧಾನ ಬದ್ಧ ಹೋರಾಟ ಮಾಡುವವರ ಮೇಲೆ ಅನಗತ್ಯ ದೇಶದ್ರೋಹದ ಕೇಸುಗಳನ್ನು ಹಾಕಿ ಜೈಲುಗಳಲ್ಲಿ ಕೊಳೆಯುವಂತೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣಾ ನೀತಿ ಸಂವಿಧಾನ ವಿರೋಧಿ ನಡೆಯಾಗಿದ್ದು ನಾಡ ಧ್ವಜಕ್ಕೆ ಮತ್ತು ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿಯನ್ನು ಸಮಿತಿಗೆ ನೇಮಕ ಮಾಡಿರುವುದು ದಲಿತ ಮತ್ತು ಶೂದ್ರರಿಗೆ ಅವಮಾನ ಮಾಡುವ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಚಾಲಕ ಆರ್.ಚಂದ್ರತೇಜಸ್ವಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಒಪ್ಪಲು ತಯಾರಿಲ್ಲದವರು, ನಮ್ಮ ಮಕ್ಕಳು ಸಂವಿಧಾನ ಓದಿದರೆ ಅವರು ಅಧಿಕಾರ ಅನುಭವಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದ್ದರಿಂದ ನಮ್ಮ ಮಕ್ಕಳನ್ನು ಸಂವಿಧಾನದಿಂದ ದೂರ ಇಡಲು ಯತ್ನಿಸುತ್ತಿದ್ದಾರೆ, ಸರ್ಕಾರದ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಸಮಾಜ ಸುಧಾರಕರಿಗೆ, ನಾಡಗೀತೆ, ನಾಡಧ್ವಜಕ್ಕೆ ಅವಮಾನಿಸಿದ ರೋಹಿತ್ ಚಕ್ರತೀರ್ಥಯನ್ನು ಈ ಕೂಡಲೇ ಬಂಧಿಸಬೇಕು. ಆತನನ್ನು ಸಮರ್ಥನೆ ಮಾಡಿಕೊಂಡಿರುವ ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯಗಳನ್ನು ರದ್ದು ಮಾಡಿ ಬರಗೂರು ರಾಮಚಂದ್ರಪ್ಪ ಅವರ ಪಠ್ಯಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
Kshetra Samachara
07/06/2022 09:49 am