ಬೆಂಗಳೂರು: ‘ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬೆಂಗಳೂರಿನ ಶಾಸಕರು ವಿಧಾನಸೌಧ ಮತ್ತು ಹೈಕೋರ್ಟ್ ಮುಂಭಾಗದಲ್ಲಿ 24 ತಾಸುಗಳ ಕಾಲ ಅಹೋರಾತ್ರಿ ಧರಣಿ ಮಾಡುತ್ತೇವೆ. ಹೀಗಾಗಿ ನಾಳೆಯಿಂದ ಆರಂಭವಾಗಬೇಕಿದ್ದ ಜಿಲ್ಲಾವಾರು ಪ್ರತಿಭಟನೆ ಒಂದು ದಿನ ಮುಂದೂಡಲಾಗಿದ್ದು, ಏಪ್ರಿಲ್ 16, ಶನಿವಾರದಿಂದ ಆರಂಭವಾಗಲಿದೆ. ಮುಂದಿನ ಹೋರಾಟದ ಬಗ್ಗೆ ನಂತರ ಮಾಹಿತಿ ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಸಿಎಂ ನಿವಾಸಕ್ಕೆ ಘೇರಾವ್‌ಗೆ ಯತ್ನಿಸಿ, ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಕಾಂಗ್ರೆಸ್ ನಾಯಕರು ವಿಧಾನಸೌಧದ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ತಮ್ಮ ಹೋರಾಟದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯವರು ಈ ಭ್ರಷ್ಟಾಚಾರ ಮುಚ್ಚಿಹಾಕಲು ಹುನ್ನಾರ ನಡೆಸಿದ್ದಾರೆ. ಇಂದು ನಾವು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವಾಗ ಪೊಲೀಸರು ನಮ್ಮನ್ನು ಬಂಧಿಸಿದರು. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಮುಖ್ಯಮಂತ್ರಿಗಳು ಭ್ರಷ್ಟರನ್ನು ರಕ್ಷಣೆ ಮಾಡಿ ಭ್ರಷ್ಟರ ನಾಯಕರಂತೆ ವಾದ ಮಂಡಿಸುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ. ನಾಳೆಯಿಂದ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ಪ್ರತಿಭಟನೆಯನ್ನು ಒಂದು ದಿನ ಮುಂದೂಡಿದ್ದು, ನಾಡಿದ್ದು ಅಂದರೆ 16ರಿಂದ ಪ್ರತಿಭಟನೆ ಮಾಡಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ.
PublicNext
14/04/2022 06:31 pm