ದೊಡ್ಡಬಳ್ಳಾಪುರ : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸದನದಲ್ಲಿ ಅಂಗೀಕರಿಸಿದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ- 2021 ಮಸೂದೆಯು ಸಂವಿಧಾನಬದ್ಧ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿಯುವ ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು.
ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂದೆ ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆ ವತಿಯಿಂದ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಾಂತರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಸಮಾನತೆ-ಸಾಮಾಜಿಕ ನ್ಯಾಯಗಳೆಂಬ ಉದಾತ್ತ ಮಾನವೀಯ ತತ್ವಗಳ ಆಧಾರದಲ್ಲಿ ಒಂದು ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ರಾಷ್ಟ್ರವಾಗಿ ಘೋಷಿಸಿಕೊಂಡಿರುವ ಭಾರತವು ಸಂವಿಧಾನದ 25 ನೇ ಅನುಚ್ಛೇದದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ತನಗೆ ಇಷ್ಟ ಬಂದ ಮತಧರ್ಮವನ್ನು ಅನುಸರಿಸುವ, ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡುವ, ಯಾವುದೇ ಮತಧರ್ಮವನ್ನು ಅನುಸರಿಸದೆ ಇರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತ್ರಿಪಡಿಸಿದೆ ಎಂದರು.
ವೇದಿಕೆಯ ಸಂಚಾಲಕ ರಾಜುಸಣ್ಣಕ್ಕಿ ಮಾತನಾಡಿ ಬಲಾತ್ಕಾರ ಮತ್ತು ಆಮಿಷದ ಮತಾಂತರವನ್ನು ತಡೆಯುವ ಉದ್ದೇಶವೆಂದು ಹೇಳಲಾದ ಈ ಮಸೂದೆಯು ಹಲವು ಕರಾಳ ಸ್ವರೂಪದ ಅಘಾತಕಾರಿ ಕಟ್ಟಳೆಗಳು ಮತ್ತು ನಿಯಮಗಳನ್ನು ಒಳಗೊಂಡಿದ್ದು ಸಮಾಜದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉಚಿತ ಶಿಕ್ಷಣ, ಉದ್ಯೋಗ ನೀಡುವುದನ್ನು ಸಹ ಮತಾಂತರದ ಉದ್ದೇಶದ ಆಮಿಷಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಶತಮಾನಗಳ ಕಾಲ ಮಹಿಳೆಯರು ಸೇರಿದಂತೆ ಅಸ್ಫೃಶ್ಯರು ಮತ್ತು ಶೂದ್ರರಿಗೆ ಅಕ್ಷರ ಜ್ಞಾನವನ್ನು ವಂಚಿಸಿದ ದೇಶದಲ್ಲಿ ಶೋಷಿತ ಸಮುದಾಯಗಳಿಗೆ ಭಾರತದ ಬಹಳಷ್ಟು ಭಾಗಗಳಲ್ಲಿ ಅಕ್ಷರದ ಬೆಳಕು ಸಿಕ್ಕಿದ್ದೇ ಧಾರ್ಮಿಕ ಸಂಸ್ಥೆಗಳ ಶಾಲಾ ಕಾಲೇಜುಗಳ ಮೂಲಕ ಎಂಬ ಅಂಶವನ್ನು ಈ ಮಸೂದೆಯು ಸಂಪೂರ್ಣವಾಗಿ ಮರೆಮಾಚಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವನಾಯ್ಕ್, ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಕರ್ನಾಟಕ ರಾಜ್ಯ ರೈತ ಶಕ್ತಿ ರಾಜ್ಯ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್, ಕ್ರೈಸ್ತ ಸಂಘಟನೆಯ ಡೇವಿಡ್ ರಾಜು, ಸುರೇಶ್, ಮುಸ್ಲಿಂ ಸಂಘಟನೆಯ ಪೀರ್‌ಪಾಷ. ದಲಿತ ಸಂಘಟನೆಯ ಛಲವಾದಿ ಸುರೇಶ್ ಉಪನ್ಯಾಸಕರಾದ ಮಾಳವ ನಾರಾಯಣ್. ಸಿಐಟಿಯು ಜಿಲ್ಲಾ ಸಮಿತಿಯ ಪಿ.ಎ.ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.
Kshetra Samachara
27/12/2021 05:10 pm