ಆನೇಕಲ್: ಸರಕಾರಿ ಅಧಿಕಾರಿಗಳೇ ಮುಂದೆ ನಿಂತು ಮಾಡಿಸಬೇಕಿದ್ದ ರಾಜಕಾಲುವೆಯ ಸ್ವಚ್ಛತಾ ಕಾರ್ಯವನ್ನು ಊರಿನ ಯುವಕರೇ ಸ್ವಯಂಪ್ರೇರಣೆಯಿಂದ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹೌದು, ದಶಕಗಳಿಂದಲೂ ಪರಿಸರದಲ್ಲಿ ವಸತಿ ಪ್ರದೇಶಕ್ಕೆ ಮಳೆನೀರು ನುಗ್ಗುವುದನ್ನು ತಪ್ಪಿಸಲು ಸ್ಥಳೀಯ ಯುವಕರು ಒಟ್ಟುಗೂಡಿ ರಾಜಕಾಲುವೆಯನ್ನು ಸ್ವಚ್ಛಗೊಳಿಸಿದ ಸೇವಾ ಕೈಂಕರ್ಯ ಆನೇಕಲ್ ಪಟ್ಟಣದಲ್ಲಿ ನಡೆಯಿತು.
ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನೆತ್ತಿಗೊಂದು ಸೂರಿಗಾಗಿ ಪರಿತಪಿಸಿದ ಜನರಿಗೆ ಮೂಲಸೌಕರ್ಯ ಒದಗಿಸುವುದಿರಲಿ, ಕನಿಷ್ಠ ಪಕ್ಷ ಅವರ ಗುಡಿಸಲುಗಳಿಗೆ ನೀರು ನುಗ್ಗದಂತೆ ತಡೆಯುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ.
ಜನಪ್ರತಿನಿಧಿಗಳ, ಅಧಿಕಾರಿಗಳ ಒಣ ಭರವಸೆಯಿಂದ ರೋಸಿ ಹೋದ ಸ್ಥಳೀಯ ಯುವಪಡೆ ಕೊನೆಗೂ ಬೆಳಗ್ಗೆ ರಾಜಕಾಲುವೆಗಿಳಿದು, ಆ ಮಲಿನ ಕೆಸರನೀರಿನ ಮಧ್ಯೆ ಸೇವಾ ಬದ್ಧತೆಯಿಂದ ದಿನವಿಡೀ ಕಾರ್ಯ ನಿರ್ವಹಿಸಿ, ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದಾರೆ.
ಆನೇಕಲ್ ಪುರಸಭೆ ವ್ಯಾಪ್ತಿಗೆ ಬರುವ ನಾರಾಯಣಪುರ-ಚಿಕ್ಕಕೆರೆ ಅಂಗಳದಂಚಿನಲ್ಲಿರುವ ಬಡ ವಸತಿಹೀನರಿಗೆ ಸರ್ಕಾರದ ಎಲ್ಲ ಯೋಜನೆಗಳೂ ಮರೀಚಿಕೆಯಾಗಿದ್ದು, ಕೇವಲ ಮತಕ್ಕಷ್ಟೇ ಲಾಯಕ್ಕಾಗಿದ್ದಾರೆ ಎಂದು ಪುರಸಭೆ ಭಾವಿಸಿರುವುದು ಮಾತ್ರ ದುರಂತ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದೆ ನಮ್ಮ ಆಶಯ.
Kshetra Samachara
23/05/2022 10:55 pm