ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಪ್ರವಾಹ ಪೀಡಿತ ಪ್ರದೇಶಗಳಾಗಿ ಮಾರ್ಪಟ್ಟಿವೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದ್ದು, ಬಿಬಿಎಂಪಿ ಭ್ರಷ್ಟ ಆಡಳಿತ ವೈಖರಿ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಜಕಾಲುವೆ ಮತ್ತು ಮಳೆ ನೀರು ಕಾಲುವೆಗಳ ನಿರ್ವಹಣೆ ಕೊರತೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಮೇ 2022 ರಿಂದ ಆಗಸ್ಟ್ ತಿಂಗಳವರೆಗೆ ಪರಿಹಾರದ ರೂಪದಲ್ಲಿ ಬರೋಬ್ಬರಿ 26,74,75,000 ಕೋಟಿ ರೂ. ವ್ಯಯ ಮಾಡಿದೆ. ಪರಿಹಾರಕ್ಕೆ ವೆಚ್ಚ ಮಾಡುವ ಬದಲು ಶಾಶ್ವತ ಮತ್ತು ಗುಣಮಟ್ಟದ ಕಾಮಗಾರಿ ವೆಚ್ಚ ಮಾಡಿದ್ರೆ ಪರಿಹಾರ ನೀಡುವುದು ತಪ್ಪಲಿದೆ ಎಂಬುದು ತೆರಿಗೆದಾರರ ಅಭಿಪ್ರಾಯವಾಗಿದೆ.
ಇನ್ನೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಸಾಯಿ ಲೇಔಟ್ ಹಾಗೂ ಪೈ ಲೇ ಔಟ್ನ ಕೆಲವು ಮನೆಗಳಲ್ಲಿ ಪ್ರತಿ ಬಾರಿ ಮಳೆ ಸುರಿದಾಗಲೂ ಮನೆಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಹೀಗಾಗಿ, ಈ ಮನೆಗಳಿಗೆ ಈವರೆಗೆ ಎರಡ್ಮೂರು ಬಾರಿ ತಲಾ 25 ಸಾವಿರ ರೂ.ನಂತೆ ಪರಿಹಾರ ನೀಡಲಾಗಿದೆ. ಮುಳುಗಡೆ ಪ್ರದೇಶದಲ್ಲಿ ಅತಿಕ್ರಮವಾಗಿ ಮನೆಗಳ ನಿರ್ಮಾಣವಾಗಿದೆ. ಹೀಗಾಗಿ ಸಾಕಷ್ಟು ಪ್ರವಾಹ ಆಗ್ತಿದ್ದು, ಕ್ರಮ ವಹಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಮಳೆಯಿಂದ ಆಗುವ ಅನಾಹುತಗಳಿಗೆ ಕೇವಲ 10 ಸಾವಿರ ಪರಿಹಾರ ನೀಡಲು ಪಾಲಿಕೆ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಸರಿಯಾದ ಕಾಮಗಾರಿ ಮಾಡದೇ ಸಾರ್ವಜನಿಕರ ತೆರಿಗೆ ಹಣವನ್ನೂ ದುಂದು ವೆಚ್ಚ ಮಾಡ್ತಿರೋದು ಎಷ್ಟು ಸರಿ ಎಂಬುದು ಸಿಲಿಕಾನ್ ಸಿಟಿಯ ತೆರಿಗೆದಾರರ ನೇರಾ-ನೇರ ಪ್ರಶ್ನೆ. ಇತ್ತ ಬಿಬಿಎಂಪಿ ಅಧಿಕಾರಿಗಳು ಮಳೆ ನಿಂತ ಮೇಲೆ ಕಾಮಗಾರಿ ಮಾಡ್ತೀವಿ ಅಂತ ಮತ್ತೆ ಅದೇ ರಾಜಕಾರಣಿ ತರ ಭರವಸೆ ನೀಡ್ತಿದ್ದಾರೆ.
ರಂಜಿತಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
02/09/2022 08:27 pm