ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ತಯಾರಿ ಆಡಳಿತಾರೂಢ ಬಿಜೆಪಿ ಸದ್ದಿಲ್ಲದೆ ನಡೆಸುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರು ರೌಂಡ್ಸ್ ನಡೆಸುತ್ತಿದ್ದಾರೆ. 2ನೇ ದಿನದ ಸಿಟಿ ರೌಂಡ್ಸ್ ಡಿಟೇಲ್ಸ್ ಇಲ್ಲಿದೆ...ನೋಡಿ.
ಅಂದಹಾಗೆ ಬಿಬಿಎಂಪಿ ನಗರದ ಹಲವೆಡೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಇವತ್ತೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದರು. ಆರಂಭದಲ್ಲಿ ಶಾಂತಿ ನಗರದ ಬೆಂಗಳೂರು ನಾಗರಿಕರ ಜಲಮಾರ್ಗ ಯೋಜನೆ ಕಾಮಗಾರಿ ಪರಿವೀಕ್ಷಣೆ ಮಾಡಿದರು. 169 ಕೋಟಿ ವೆಚ್ಚದಲ್ಲಿ 9.60 ಕಿ.ಮೀ. ಮಾರ್ಗದ ಬೃಹತ್ ನೀರುಗಾಲುವೆ ಯೋಜನೆ ಕಾಮಗಾರಿ ಪರಿಶೀಲಿಸಿದರು.
ಇನ್ನು, 5 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಬೈರಸಂದ್ರ ಕೆರೆ ಲೋಕಾರ್ಪಣೆ ಮಾಡಿದರು. ಬೆಂಗಳೂರು ದಕ್ಷಿಣ ವಲಯದ ಕೆರೆ ಅಭಿವೃದ್ಧಿಗೆ 2018-19ರಲ್ಲಿ ಚಾಲನೆ ನೀಡಲಾಗಿತ್ತು. ಕೆರೆ ಒಳಹರಿವು ಕಾಲುವೆ ನಿರ್ಮಾಣ, ತಡೆಗೋಡೆ ನಿರ್ಮಾಣ, ಫುಟ್ ಪಾತ್ ಅಭಿವೃದ್ಧಿ, 0.50 ಎಂಎಲ್ ಡಿ ಕೊಳಚೆ ನೀರಿನ ಸಂಸ್ಕರಣೆ ಘಟಕ ನಿರ್ಮಾಣ ಬಗ್ಗೆ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜತೆಗೆ ಗಾಂಧಿ ಬಜಾರ್ ನಲ್ಲಿ ಬಹು ಮಹಡಿ ವಾಹನ ನಿಲ್ದಾಣ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.1875 ಲಕ್ಷ ರೂ. ಮೊತ್ತದಲ್ಲಿ 1469 ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡ ತಲೆ ಎತ್ತಲಿದೆ.
ಇವತ್ತು ಅರ್ಧ ದಿನ ಸಿಎಂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಬಸವನಗುಡಿ ಕ್ಷೇತ್ರದಲ್ಲಿ ರೌಂಡ್ ಹಾಕಿದರು. ನಾನಾ ಕಾಮಗಾರಿಗೆ ವೇಗ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಹಾಗೂ ಕಾರ್ಪೊರೇಟರ್ ಆಕಾಂಕ್ಷಿಗಳ ದಂಡೇ ಸಿಎಂ ಹಿಂದೆ - ಮುಂದೆ ಇದ್ದರು.
- ಗಣೇಶ್ ಹೆಗಡೆ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
15/06/2022 07:26 pm