ವರದಿ- ಗಣೇಶ್ ಹೆಗಡೆ
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲು ಮುಂದಾಗಿರುವ ಚುನಾವಣಾ ಆಯೋಗ ಶನಿವಾರದಿಂದಲೇ ಪ್ರಕ್ರಿಯೆ ಆರಂಭಿಸಿದೆ. 2022ರ ಜನವರಿ 13ರಂದು ಅಂತಿಮಗೊಳಿಸಲಾದ ಮತದಾರರ ಪಟ್ಟಿಯಂತೆ 243 ವಾರ್ಡ್ ಗಳ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿ ಆದೇಶಿಸಿದೆ.
ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದಾಗಿ ರಚನೆಯಾಗಿರುವ 243 ವಾರ್ಡ್‌ಗಳ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಅದರ ಜತೆಗೆ ಮತಗಟ್ಟೆಗಳ ರಚನೆಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚುನಾವಣಾ ಆಯೋಗ ಹೊರಡಿಸಿರುವ ಆದೇಶದಂತೆ ಇಂದಿನಿಂದ ಆರಂಭಗೊಳ್ಳಲಿರುವ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯ ಸೆಪ್ಟೆಂಬರ್ 22ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವಂತೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ.
ಮತದಾರರ ಪಟ್ಟಿಯನ್ನು ಮುಖ್ಯ ಆಯುಕ್ತರು ಮತ್ತು ಜುಲೈ 22ರ ಆದೇಶದಂತೆ ನೇಮಿಸಲಾಗಿರುವ ಜಿಲ್ಲಾ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಬಿಬಿಎಂಪಿಯ 8 ವಲಯಗಳ ವಲಯ ಆಯುಕ್ತರು ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯದ ಮೇಲುಸ್ತುವಾರಿ ವಹಿಸಲಿದ್ದಾರೆ. ಮತದಾರರ ಪಟ್ಟಿ ಸಿದ್ಧಪಡಿಸಿದ ನಂತರ ಅದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಲು ಆಯಾ ವಾರ್ಡ್‌ನ ವಾರ್ಡ್ ಕಚೇರಿಯಲ್ಲಿ ದೂರು ಸಲ್ಲಿಕಾ ಕೇಂದ್ರ ಆರಂಭಿಸುವಂತೆ ತಿಳಿಸಲಾಗಿದೆ.
ಮತದಾರರ ಪಟ್ಟಿ ಸಿದ್ಧಪಡಿಸುವುದರ ಜತೆಗೆ ಮತಗಟ್ಟೆ ಸ್ಥಾಪನೆ ಬಗ್ಗೆಯೂ ಚುನಾವಣಾ ಆಯೋಗ ಆದೇಶದಲ್ಲಿ ಉಲ್ಲೇಖಿಸಿದೆ. ಅದರ ಪ್ರಕಾರ 300ರಿಂದ 1400 ಮತದಾರರಿಗೊಂದು ಮತಗಟ್ಟೆ ಸ್ಥಾಪಿಸುವಂತೆ ತಿಳಿಸಲಾಗಿದೆ. ಅಲ್ಲದೆ ಮತಗಟ್ಟೆ ಸ್ಥಾಪನೆ ವೇಳೆ ಯಾವುದೇ ಲೋಪ ಎಸಗದಂತೆಯೂ ಸೂಚಿಸಲಾಗಿದೆ.
Kshetra Samachara
30/07/2022 05:42 pm