ಬೆಂಗಳೂರು-ಮಾಜಿ ಸಚಿವ ಸಿ.ಟಿ.ರವಿ ಹೆಸರಿನಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಹಲವು ಮಹಿಳಾ ನೌಕರರಿಗೆ ಬರೋಬ್ಬರಿ 78 ಲಕ್ಷ ವಂಚನೆ ಮಾಡಿರುವ ಸಂಬಂಧ ಸುದ್ದುಗುಂಟೆ ಪಾಳ್ಯ ಠಾಣಾ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ
ನಗರದ ಹೊಸೂರು ರಸ್ತೆಯ ಗೌಸಿಯಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಗೌಸಿಯಾ ಪಾಲಿಟೆಕ್ನಿಕ್ ಫಾರ್ ವುಮೆನ್ ಕಾಲೇಜಿನಲ್ಲಿ ನೌಕರರಿಗೆ 78 ಲಕ್ಷ ರೂ.ವಂಚಿಸಿರುವ ಆರೋಪದ ಸುಭಾನ್ ಶರೀಫ್ ವಿರುದ್ಧ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಗೌಸಿಯಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟ್ರಸ್ಟ್ ಅಧ್ಯಕ್ಷ ಡಾ.ಅಹ್ಮದ್ ಶರೀಫ್ ಸಿರಾಜ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸುದ್ದುಗುಂಟೆ ಪಾಳ್ಯ ಠಾಣಾ ಪೊಲೀಸರು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಹೂಡಿದ್ದಾರೆ.
ಗೌಸಿಯಾ ಪಾಲಿಟೆಕ್ನಿಕ್ ಫಾರ್ ವುಮೆನ್ ಕಾಲೇಜಿನಲ್ಲಿ ಈ ಹಿಂದೆ 2013 ರಿಂದ 2018ರವರೆಗೆ ಗೌವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಆದ ಸುಭಾನ್ ಶರೀಫ್, ಕಾಲೇಜನ್ನು ಸರ್ಕಾರದ ಅನುದಾನಿತ ಕಾಲೇಜ್ ಆಗಿ ಸರ್ಕಾರದಿಂದ ಅನುಮೋದನೆ ಪಡೆದು, ಇಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರ್ಕಾರದಿಂದ ಸಂಬಳ ಬರುತ್ತದೆ ಎಂದು ಸುಳ್ಳು ಹೇಳಿದ್ದರು.ಆದರೆ, 2013 ರಿಂದ 2016ರವರೆಗೆ ನೌಕರರಿಗೆ ಸಂಬಳ ಕೊಟಿಲ್ಲ ಎಂದು ಅಹ್ಮದ್ ಶರೀಫ್ ಸಿರಾಜ್ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಮಗೆ ಆಪ್ತರಾಗಿದ್ದಾರೆ. ಇನ್ನೂ, ಸಂಸ್ಥೆಯು ಅನುದಾನಿತ ಸಂಸ್ಥೆಯಾಗುತ್ತಿದ್ದು, ಇದರಿಂದ ನಿಮಗೆ ಸರ್ಕಾರದಿಂದ ಸಂಬಳ ಕೊಡಿಸುತ್ತೇನೆ ಎಂದು ನಂಬಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 70 ಜನ ನೌಕರರ ಬಳಿ ಸುಮಾರು 78 ಲಕ್ಷ ರೂ.ಅಕ್ರಮವಾಗಿ ಹಣ ಸಂಗ್ರಹಿಸಿರುವ ಸುಭಾನ್ ಶರೀಫ್ ಅದನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ನೌಕರರಿಗೆ ಮೋಸ ಮಾಡಿ, ಸಂಸ್ಥೆಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನೌಕರರು ಹಣ ವಾಪಸ್ ಕೊಡುವಂತೆ ಕೇಳಲು ಹೋದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಆದುದರಿಂದ, ಆತನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಕೋರಿದ್ದಾರೆ.
PublicNext
20/01/2022 02:40 pm