ಬೆಂಗಳೂರು: 40% ಲಂಚಕ್ಕೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿ ಉಡುಪಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಂತೋಷ್ ಕುಟುಂಬಸ್ಥರು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಉಡುಪಿ ಪೊಲೀಸರು ನಡೆಸಿದ ತನಿಖೆ ನ್ಯಾಯಯುತವಾಗಿಲ್ಲ. ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದಾರೆ. ಪಾರದರ್ಶಕ ತನಿಖೆಗಾಗಿ ಸಿಬಿಐ ಒಪ್ಪಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಮೃತ ಸಂತೋಷ್ ಸಹೋದರ ಪ್ರಶಾಂತ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಮತ್ತೆ ಸಂಕಷ್ಟ ತಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್, ಸಂತೋಷ್ ಆತ್ಮಹತ್ಯೆ ಹಿಂದೆ ಹಲವರ ಕೈವಾಡವಿದೆ. ಉಡುಪಿ ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸದೆ ಹಾದಿ ತಪ್ಪಿಸಿದ್ದಾರೆ. ತನಿಖೆ ವೇಳೆ ಹಲವು ರೀತಿಯ ಪ್ರಭಾವಗಳು ಬೀರಿವೆ. ಹೀಗಾಗಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಕಾನೂನು ಹೋರಾಟ ನಡೆಸುವೆ ಎಂದಿದ್ದಾರೆ.
ಕಾಮಗಾರಿ ನಡೆಸಿದ ಸಂಬಂಧ ಸರ್ಕಾರದಿಂದ ಬಿಲ್ ಮಂಜೂರು ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರು ಶೇ.40ರಷ್ಟು ಕಮೀಷನ್ ಕೇಳಿದ್ದರು ಎಂದು ಮೃತ ಸಂತೋಷ್ ಆರೋಪಿಸಿದ್ದರು. ಈ ಸಂಬಂಧ ಪ್ರಧಾನಿ ನರೇಂದ್ರಮೋದಿ, ರಾಜ್ಯಪಾಲರಿಗೂ ದೂರು ನೀಡಿದ್ದರು. ಈ ವಿಚಾರ ರಾಷ್ಟೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಕಳೆದ ಏಪ್ರಿಲ್ ನಲ್ಲಿ ಉಡುಪಿ ಲಾಡ್ಜ್ ವೊಂದರಲ್ಲಿ ಈಶ್ವರಪ್ಪ ಹೆಸರು ಬರೆದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಎಸ್ಪಿ ವಿಷ್ಣುವರ್ಧನ್ ನೇತೃತ್ವ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಬಿ ರಿಪೋರ್ಟ್ ಪ್ರಶ್ನಿಸಿ ಇದೀಗ ಸಂತೋಷ್ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ.
PublicNext
23/08/2022 03:21 pm