ದೊಡ್ಡಬಳ್ಳಾಪುರ: ನಾಗರಕೆರೆಯೊಳಗೆ ಮ್ಯಾನ್ ಹೋಲ್‌ಗಳು ಹಾದು ಹೋಗಿದ್ದು, ಮ್ಯಾನ್ ಹೋಲ್‌ಗಳಿಂದ ನಗರದ ತ್ಯಾಜ್ಯ ನೀರು ಕಾರಂಜಿಯಂತೆ ಚಿಮ್ಮುತ್ತಿದೆ. ನಗರದ ವಿಷಯುಕ್ತ ತ್ಯಾಜ್ಯ ನೀರು ಕೆರೆಯ ಒಡಲು ಸೇರಿ ಪರಿಶುದ್ಧವಾದ ಕೆರೆಯ ಪರಿಸರವನ್ನ ಹಾಳು ಮಾಡುತ್ತಿದೆ.
ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿ ನಾಗರಕೆರೆ ಇದ್ದು, ಪಂಚಗಿರಿಶ್ರೇಣಿಯಲ್ಲಿ ಹುಟ್ಟುವ ಅರ್ಕಾವತಿ ನದಿ ಸಹ ಇದೇ ಕೆರೆಯ ಮೂಲಕ ಹಾದು ಹೋಗುತ್ತದೆ. ನಗರದಲ್ಲಿ ಅಳವಡಿಸಿರುವ ಒಳಚರಂಡಿಯ ಪೈಪ್ ಲೈನ್ ಸಹ ಇದೇ ಕೆರೆಯ ಮೂಲಕ ಹಾದು ಹೋಗಿದ್ದು, ಕೆರೆಯ ಅಂಗಳದಲ್ಲಿ 20ಕ್ಕೂ ಹೆಚ್ಚು ಮ್ಯಾನ್ ಹೋಲ್‌ಗಳ ನಿರ್ಮಾಣ ಮಾಡಲಾಗಿದೆ. ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಮ್ಯಾನ್ ಹೋಲ್‌ಗಳು ಕೊಳಚೆ ನೀರು ಚಿಮ್ಮಿಸುವ ಕಾರಂಜಿಗಳಾಗಿ ಬದಲಾಗಿವೆ.
ನಗರದ ಶೌಚಾಲಯದ ನೀರು, ಬಣ್ಣದ ಕಾರ್ಖಾನೆಗಳ ರಸಾಯನಿಕ ನೀರು ಮ್ಯಾನ್ ಹೋಲ್‌ಗಳ ಸೋರಿಕೆಯಿಂದ ಕೆರೆಯ ಒಡಲು ಸೇರುತ್ತಿದೆ. ವಿಷಯುಕ್ತ ನೀರು ಕೆರೆಗೆ ಸೇರುತ್ತಿರುವುದರಿಂದ ಜಲಚರ ಜೀವಿಗಳು, ಜಾನುವಾರುಗಳ ಮತ್ತು ವಲಸೆ ಪಕ್ಷಿಗಳ ಜೀವಕ್ಕೂ ಕುತ್ತು ತಂದಿದೆ. ಕೋಡಿ ಬಿದ್ದ ಕೆರೆ ನೀರು ಕೆಲವೇ ದಿನಗಳಲ್ಲಿ ಖಾಲಿಯಾಗಲು ಸಹ ಮ್ಯಾನ್ ಹೋಲ್‌ಗಳು ಕಾರಣವಾಗಿದೆ.
ನಗರದ ಸ್ವಚ್ಛತೆ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟಲು 40 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ನಗರದ ಒಳಚರಂಡಿ ವ್ಯವಸ್ಥೆಯೇ ನಗೆಪಾಟಲಿಗೆ ಗುರಿಯಾಗಿದೆ. ಕೆರೆಯೊಳಗೆ ಒಳಚರಂಡಿ ಪೈಪ್ ಲೈನ್ ತಂದು ಮ್ಯಾನ್ ಹೋಲ್ ನಿರ್ಮಿಸಿದ ಇಂಜಿನಿಯರ್‌ಗಳ ಪ್ರಾವಿಣ್ಯತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ.
PublicNext
06/08/2022 10:27 pm