13 ತಿಂಗಳಲ್ಲಿ ಮುಗಿಯಬೇಕಿದ್ದ ಉಕ್ಕಿನ ಸೇತುವೆ ಕಾಮಗಾರಿ, 60 ತಿಂಗಳಿಗೆ ಮುಕ್ತಿ ದೊರೆಯುವ ಸಾಧ್ಯತೆ ಕಾಣುತ್ತಿದೆ. ಈ ಮೂಲಕ ಮುಂದಿನ ಆಗಸ್ಟ್ 15 ರೊಳಗೆ ವಾಹನ ಸವಾರರಿಗೆ ಕಿರಿಕಿರಿ ತಪ್ಪಲಿದೆ.
ಶಿವಾನಂದ ವೃತ್ತ ಬಳಿ ನಿರ್ಮಾಣವಾಗುತ್ತಿರುವ ಉಕ್ಕಿನ ಸೇತುವೆಯ ಕಥೆ ಇದು. 2017ರ ಜೂನ್‌ನಲ್ಲಿ ಎಂ.ವೆಂಕಟ ರಾವ್ ಇನ್‌ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿ. ಕಂಪನಿಗೆ ಕಾಮಗಾರಿ ಗುತ್ತಿಗೆ ವಹಿಸಿ ಬಿಬಿಎಂಪಿ ಕಾರ್ಯಾದೇಶ ನೀಡಿತ್ತು. 13 ತಿಂಗಳಲ್ಲಿ ಅಂದರೆ 2018ರ ಜುಲೈನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾಲಮಿತಿ ನಿಗದಿ ಮಾಡಿತ್ತು. ಆದರೆ, ನಿಗದಿತ ಅವಧಿಗಿಂತ 4 ಪಟ್ಟು ಹೆಚ್ಚು ಸಮಯದ ಬಳಿಕ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ.
ಕುಮಾರಕೃಪಾ ರಸ್ತೆ, ರೇಸ್ ಕೋರ್ಸ್ ರಸ್ತೆ, ಹರೇ ಕೃಷ್ಣ ರಸ್ತೆ ಹಾಗೂ ಬಸವೇಶ್ವರ ವೃತ್ತದೆಡೆಗೆ ಸಾಗುವ ರಸ್ತೆಗಳು ಶಿವಾನಂದ ವೃತ್ತದ ಬಳಿ ಸೇರುತ್ತವೆ. ನಾಲ್ಕೂ ರಸ್ತೆಗಳಲ್ಲಿ ವಾಹನ ಸಾಲುಗಟ್ಟಿ ನಿಲ್ಲುತ್ತವೆ. ವಾಹನ ಸವಾರರು ಇಲ್ಲಿ ನಿತ್ಯ ಪಡಿಪಾಟಲು ಅನುಭವಿಸುತ್ತಿದ್ದಾರೆ.
ಕಾಮಗಾರಿ ನಡೆಯುತ್ತಿರುವುದರಿಂದ ರೇಸ್ ಕೋರ್ಸ್ ರಸ್ತೆಯಿಂದ ಪ್ರವೇಶ ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತ ಕಡೆಯಿಂದ ಬರುವ ವಾಹನಗಳು ರೇಸ್ ಕೋರ್ಸ್ ರಸ್ತೆಯಲ್ಲೇ ಮುಂದುವರಿದು ಕುಮಾರಕೃಪಾ ರಸ್ತೆ ಕಡೆ ತಿರುವು ಪಡೆದು ಶಿವಾನಂದ ವೃತ್ತಕ್ಕೆ ಬರಬೇಕು. ಕಳೆದ 4 ವರ್ಷಗಳಿಂದ ಜನ ಈ ಸುತ್ತು ಬಳಸು ಹಾದಿಯಲ್ಲೇ ಕ್ರಮಿಸುತ್ತಿದ್ದಾರೆ. ಪರ್ಯಾಯ ಮಾರ್ಗಗಳ ಮೇಲೆ ಹೆಚ್ಚುವರಿ ಸಂಚಾರ ಒತ್ತಡ ಹೇರಲಾಗುತ್ತಿದೆ. ಇಲ್ಲಿ ದಟ್ಟಣೆಯಿಂದ ನಿಧಾನವಾಗಿ ಸಂಚರಿಸಬೇಕು. ಜತೆಗೆ ಹೆಚ್ಚುವರಿ ಇಂಧನದ ಹೊರೆಯನ್ನೂ ಸವಾರ ಹೊರಬೇಕು.
* ಶಿವಾನಂದ ವೃತ್ತ ಉಕ್ಕಿನ ಸೇತುವೆ ಉದ್ದ – 493 ಮೀ.
* ಯೋಜನೆ ಅಂದಾಜು ವೆಚ್ಚ– ₹60 ಕೋಟಿ
* ಕಾಮಗಾರಿ ಆರಂಭವಾಗಿದ್ದು– 2017ರ ಮಾರ್ಚ್
* ಗುತ್ತಿಗೆ ಪಡೆದ ಕಂಪನಿ; ಎಂ.ವೆಂಕಟರಾವ್ ಇನ್‌ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿ.
* ಬಿಬಿಎಂಪಿ ಯೋಜನಾ ವಿಭಾಗದಿಂದ ಕಾಮಗಾರಿ ನಿರ್ವಹಣೆ
ವರದಿ: ಗಣೇಶ್ ಹೆಗಡೆ
PublicNext
09/07/2022 03:57 pm