ಬೆಂಗಳೂರು: ಸತತ 6 ವರ್ಷಗಳಿಂದ ಕೆಆರ್ ಐಡಿಎಲ್ ಸಂಸ್ಥೆ ನಿರ್ವಹಿಸಿರುವ ಬರೋಬ್ಬರಿ 13 ಸಾವಿರ ಬಹುಕೋಟಿ ಮೊತ್ತದ ಕಾಮಗಾರಿಗಳ ಬೃಹತ್ ಹಗರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ಜೊತೆಗೆ 6 ಐಎಫ್ ಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಗರಣಕ್ಕೆ ಸಂಬಂಧಿಸಿ 6,932 ಪುಟಗಳ ದಾಖಲೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ರಿಂದ 2020-21ರ ವರೆಗೆ 6 ವರ್ಷಗಳ ಕಾಲ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಆರ್ ಐಡಿಎಲ್ ಮೂಲಕ 13,000 ಕೋಟಿ ಮೊತ್ತ ಬೃಹತ್ ಹಗರಣ ನಡೆದಿದೆ ಎಂದು ಆರೋಪಿಸಿದರು.
ಈ ಹಗರಣದಲ್ಲಿ ಭಾಗಿಯಾದ ಕೆಆರ್ ಐಡಿಎಲ್ ನ 6 ಐಎಫ್ ಎಸ್ ಅಧಿಕಾರಿಗಳ ಸಹಿತ 62 ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂಗೆ ಹಾಗೂ ಸಂಬಂಧಿತ ತನಿಖಾ ಸಂಸ್ಥೆಗಳಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ ಎಂದರು.
ಹಾಗೆಯೇ ಕೆಆರ್ ಐಡಿಎಲ್ ನಿಂದ ಉಪ ಗುತ್ತಿಗೆಯನ್ನು ಗ್ರೂಪ್ ಲೀಡರ್ ಹೆಸರಿನಲ್ಲಿ ಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ವಂಚಿಸಿರುವ ಎಲ್ಲಾ ಉಪ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಎಲ್ಲರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಪಾಲಿಕೆಯ ಮುಖ್ಯ ಆಯುಕ್ತರಿಗೆ ಆದೇಶಿಸುವಂತೆ ಕೋರಿದ್ದು, ಸಿಎಂ ಸ್ಪಂದಿಸಿದ್ದಾರೆ ಎಂದರು.
ಅಲ್ಲದೆ, ತುರ್ತು ಕಾಮಗಾರಿ ಹೊರತುಪಡಿಸಿ, ಇನ್ಯಾವುದೇ ಕಾಮಗಾರಿಗಳ ನಿರ್ವಹಣೆ ಹೊಣೆಯನ್ನು ಕೆಆರ್ ಐಡಿಎಲ್ ಗೆ ವಹಿಸದಂತೆ “ಸರ್ಕಾರಿ ಆದೇಶ”ದ ಅಧಿಸೂಚನೆ ಪ್ರಕಟಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
PublicNext
16/03/2022 11:14 pm