ಬೆಂಗಳೂರು: ನಗರದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಇದೇ ಜನವರಿ 3 ರಿಂದ ಲಸಿಕೆ ನೀಡುವ ಸಲುವಾಗಿ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ನಿಯಂತ್ರಿಸುವ ಸಂಬಂಧ ವರ್ಚುವಲ್ ಮೂಲಕ ನಿನ್ನೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪಟ್ಟಿಯನ್ನು ವಲಯವಾರು ಸಿದ್ದಪಡಿಸಿಕೊಂಡು, ಎಲ್ಲಾ ಶಾಲಾ-ಕಾಲೇಜುಗಳಿಗೆ ಲಸಿಕೆ ನೀಡುವ ಸಿಬ್ಬಂದಿಯ ನಿಯೋಜನೆ ಮಾಡಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 15-17 ವರ್ಷದ ವಯಸ್ಸಿನ ಸುಮಾರು 5 ಲಕ್ಷ ಮಕ್ಕಳಿದ್ದು, ಅವರಿಗೆ ಜನವರಿ 3 ರಿಂದ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿನ ಈ ವಯಸ್ಸಿನ ಅರ್ಹ ಮಕ್ಕಳು, ಶಾಲೆಯಿಂದ ಹೊರಗುಳಿದಿರುವ ಮತ್ತು ಕೈಗಾರಿಕಾ ವಲಯಗಳಲ್ಲಿ ಕೆಲಸಕ್ಕೆ ಸೇರಿಕೊಂಡಿರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲಾಗುವುದು. ಈ ಪೈಕಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ, ಲಸಿಕಾ ಫಲಾನುಭವಿ ಮಕ್ಕಳ ಸಂಖ್ಯೆ ಹಾಗೂ ಲಸಿಕಾಕರಣ ನಡೆಯುವ ಸ್ಥಳಗಳ ಸಂಖ್ಯೆ ಇತ್ಯಾದಿ ಸಹಿತ ಮಾಹಿತಿ ಕಲೆಹಾಕಿ ವಲಯವಾರು ಕ್ರಿಯಾ ಯೋಜನೆಯನ್ನು ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಪ್ರತಿನಿತ್ಯ ಸುಮಾರು 45,000 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಸೂಚಿಸಿದ ಅವರು, ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ನೀಡಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧಗಳ(ಮಾರುಕಟ್ಟೆ, ರೆಸ್ಟೋರೆಂಟ್, ಬಾರ್ ಗಳಲ್ಲಿ ಜನ ಸೇರುವಿಕೆ ಇನ್ನಿತ್ಯಾದಿ...) ಜಾರಿಗಾಗಿ ಆಯಾ ವಲಯ ಮಟ್ಟದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಕೋವಿಡ್ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರೆಸ್ಟೋರೆಂಟ್, ವಾಣಿಜ್ಯ ಉದ್ದಿಮೆಗಳಲ್ಲಿ ಕೋವಿಡ್ ನಿಯಮಗಳು ಉಲ್ಲಂಘಿಸುವುದು ಕಂಡುಬಂದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಗೌರವ್ ಗುಪ್ತ ಸೂಚನೆ ನೀಡಿದರು.
Kshetra Samachara
29/12/2021 09:14 am