ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡಿಎದಿಂದ ಜರ್ಮನ್ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ

ಬೆಂಗಳೂರು: ಇದೇ ಮೊದಲ ಬಾರಿಗೆ ಸಾಯಿಲ್ ಸ್ಟಬಿಲೈಸೇಶನ್ ಟೆಕ್ನಾಲಾಜಿ (ಮಣ್ಣು ಸ್ಥಿರೀಕರಣ ತಂತ್ರಜ್ಞಾನ) ಬಳಸಿ ಮಾದನಾಯಕನಹಳ್ಳಿಯಿಂದ ಕಾಚೋಹಳ್ಳಿ ಗ್ರಾಮದವರೆಗಿನ 15 ಕಿಲೋಮೀಟರ್ ರಸ್ತೆ ನಿರ್ಮಾಣ ಕಾಮಗಾರಿಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಈ ಹಿಂದೆ ಬಿಡಿಎ ನಿರ್ಮಿಸಿದ್ದ ರಸ್ತೆ ಹಾಳಾಗಿತ್ತು. ಇದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಡಿಎವತಿಯಿಂದ ಜರ್ಮನಿ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

15 ಕಿಲೋಮೀಟರ್ ಉದ್ದದ ರಸ್ತೆಯು 10 ಮೀಟರ್ ಅಗಲವಿರಲಿದ್ದು, ಇದಕ್ಕೆ ಸುಮಾರು 45 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಈ ರಸ್ತೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಆರ್ಥಿಕ, ಸಾಮಾಜಿಕವಾಗಿ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಏನಿದು ಸಾಯಿಲ್ ಸ್ಟಬಿಲೈಸೇಶನ್ ಟೆಕ್ನಾಲಜಿ? ರಸ್ತೆಯಲ್ಲಿನ ಮಣ್ಣು, ಡಾಂಬರ್, ಜಲ್ಲಿಯನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡುವ ತಂತ್ರಜ್ಞಾನ ಇದಾಗಿದೆ. 1 ಅಡಿ ಆಳದವರೆಗೆ ಇರುವ ಡಾಂಬರ್, ಜಲ್ಲಿ ಮತ್ತು ಮಣ್ಣನ್ನು ಜರ್ಮನ್ ನಿಂದ ತರಿಸಲಾಗುವ ಯಂತ್ರಗಳಿಂದ ಪುಡಿ ಮಾಡಿ ಪೇಸ್ಟ್ ರೀತಿಯಲ್ಲಿ ಮಾರ್ಪಡಿಸಿ ಅದಕ್ಕೆ ಸಿಮೆಂಟ್, ರಾಸಾಯನಿಕ ಮತ್ತು ನೀರನ್ನು ಸೇರಿಸಿ ಮಣ್ಣನ್ನು ಸ್ಥಿರೀಕರಿಸಲಾಗುತ್ತದೆ.

ಇದನ್ನು ರಸ್ತೆಗೆ ಹಾಕಿ 3 ದಿನಗಳವರೆಗೆ ಕ್ಯೂರಿಖಗ್ ಮಾಡಲಾಗುತ್ತದೆ. ನಂತರ ಅದರ ಮೇಲೆ ಜಿಯೋ ಟೆಕ್ಸ್ ಟೈಲ್ ಲೇಯರ್ ನ ಅತ್ಯಂತ ತೆಳುವಾದ ಪ್ಲಾಸ್ಟಿಕ್ ಶೀಟ್ ಅನ್ನು ಹಾಕಲಾಗುತ್ತದೆ. ಇದರ ಮೇಲೆ ಡಾಂಬರ್ ಹಾಕಲಾಗುತ್ತದೆ.

ಈ ರಸ್ತೆಯ ಕಾಂಕ್ರೀಟ್ ರಸ್ತೆಯಂತೆಯೇ ಕಾಣುತ್ತದೆ. ಇದರ ಜೀವಿತಾವಧಿ 30 ವರ್ಷಗಳಿಗೂ ಅಧಿಕವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ಬಿಡಿಎ ಆಯುಕ್ತ ರಾಜೇಶ್ ಗೌಡ, ಅಭಿಯಂತರ ಸದಸ್ಯ ಡಾ.ಶಾಂತರಾಜಣ್ಣ, ಸ್ಥಳೀಯ ಮುಖಂಡರು ಇದ್ದರು.

Edited By : PublicNext Desk
Kshetra Samachara

Kshetra Samachara

08/06/2022 07:55 pm

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ