ಬೆಂಗಳೂರು: ನಗರದ ಉತ್ತರ ವಿವಿ ಹಾಗೂ ಬೆಂಗಳೂರು ನಗರ ವಿವಿ ನಡುವೆ ಜಗಳ ತಾರಕಕ್ಕೇರಿದೆ. ವಿವಿ ವಿಭಜನೆಯಾಗಿ 3 ವರ್ಷವಾದರೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಟ್ಟಡಕ್ಕಾಗಿ 2 ವಿಶ್ವವಿದ್ಯಾಲಯ ಮಧ್ಯೆ ಕಿತ್ತಾಟ ಮುಂದುವರಿದಿದ್ದು, ಪ್ರಮುಖ ಕಡತಗಳು ಬೀದಿಪಾಲಾಗಿದೆ.
ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಮುಖ್ಯ ಫೈಲ್‌ಗಳು, ವಿದ್ಯಾರ್ಥಿಗಳ ಅಂಕಪಟ್ಟಿ, ಉತ್ತರ ಪತ್ರಿಕೆ, ಉಪನ್ಯಾಸಕರ ನೇಮಕಾತಿ ಫೈಲ್‌ಗಳು ಬೀದಿಪಾಲಾದ ಆರೋಪ ಕೇಳಿ ಬಂದಿದೆ.
ಅಲ್ಲದೆ, ಕಟ್ಟಡ ಕಿತ್ತಾಟ ನೆಪದಲ್ಲಿ ಕಚೇರಿ ಕಿಟಕಿ, ಫೈಲ್‌ಗಳನ್ನು ಕಿತ್ತು ಹೊರಗೆಸೆದ ಆರೋಪವಿದೆ. ಬೆಂಗಳೂರು ನಗರ ವಿವಿ ಕುಲಸಚಿವ ಶ್ರೀಧರ್ ವಿರುದ್ಧ ಬೆಂಗಳೂರು ಉತ್ತರ ವಿವಿಯಿಂದ ಈ ಬಗ್ಗೆ ಆರೋಪ ಕೇಳಿ ಬಂದಿದೆ.
ಬೆಂಗಳೂರು ನಗರ ವಿವಿಯ ಕಟ್ಟಡವನ್ನು ಉತ್ತರ ವಿವಿಗೆ ಬಿಟ್ಟುಕೊಡುವಂತೆ ಕೋರ್ಟ್‌ನಿಂದ ಆದೇಶ ಬಂದಿದೆ. ಆದರೂ ಬೆಂಗಳೂರು ನಗರ ವಿವಿ ತಲೆಕೆಡಿಸಿಕೊಂಡಿಲ್ಲ. ಉತ್ತರ ವಿವಿ ಸದ್ಯ ಕಟ್ಟಡವನ್ನು ಲೀಗಲ್ ಸೆಲ್ ಆಗಿ ಬಳಸಿಕೊಳ್ಳುತ್ತಿದೆ. ಆದರೆ, ಮಾಹಿತಿ ನೀಡದೆ ಕಡತ ಹೊರಗೆಸೆದ ಆರೋಪ ಮಾಡಲಾಗಿದೆ.
ಏಕಾಏಕಿ ಕೊಠಡಿಯಲ್ಲಿದ್ದ ಫೈಲ್‌ಗಳನ್ನು ಬೆಂಗಳೂರು ನಗರ ವಿವಿ ಕುಲಸಚಿವ ಹೊರಗೆಸೆದಿದ್ದಾರೆ. ಕೋರ್ಟ್ ಸಮೀಪವೇ ಇರುವುದರಿಂದ ನಗರ ವಿವಿಯಲ್ಲಿ ಒಂದು ಕಟ್ಟಡ ಬಳಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಆದರೆ, ಮಾಹಿತಿ ನೀಡದೆಯೇ ಕಡತಗಳನ್ನು ಹೊರಗೆಸೆದು ಮೊಂಡಾಟ ಮಾಡಿದ್ದಾರೆ. ಈಗ ಕಚೇರಿಯಲ್ಲಿದ್ದ ಕಡತಗಳನ್ನು ಎಲ್ಲಿ ಇಡಬೇಕು ಎಂಬ ಗೊಂದಲ ಶುರುವಾಗಿದೆ. ದಾಖಲೆ ಹೇಗೆ ಕಾಪಾಡಿಕೊಳ್ಳಬೇಕು ಎಂದು ಬೆಂಗಳೂರು ಉತ್ತರ ವಿವಿ ಪ್ರಶ್ನಿಸಿದೆ.
Kshetra Samachara
24/02/2022 09:41 am