ದೊಡ್ಡಬಳ್ಳಾಪುರ: ತಾಲೂಕಿನ ಗಡಿ ಭಾಗದಲ್ಲಿರುವ ಆರೂಢಿ ಗ್ರಾಮದ ಅರವಿಂದ ಪ್ರೌಢಶಾಲೆಗೆ ದಾನಿಗಳಾದ ಆನಂದ್ ತಮ್ಮ ನಂದನವನ ಚಾರಿಟೇಬಲ್ ಟ್ರಸ್ಟ್ ನಿಂದ ಕೊಠಡಿಗಳ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ತಾಲೂಕಿನ ಆರೂಢಿ ಗ್ರಾಮದ ಅರವಿಂದ ಪ್ರೌಢಶಾಲೆಯಲ್ಲಿ ನಂದನವನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು, 500 ಮಕ್ಕಳಿಗೆ ಬ್ಯಾಗ್ ವಿತರಣೆ ಸಹ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಸಿ.ಎಸ್.ಕರಿಗೌಡ, ನಂದನವನ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಆನಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಸಿ.ಎಸ್.ಕರಿಗೌಡ ನಂದನವನ ಚಾರಿಟೇಬಲ್ ಟ್ರಸ್ಟಿನ ಆನಂದ್ ಅವರು ಮಾಡುತ್ತಿರುವ ಸಮಾಜಮುಖಿ ಸೇವೆ ಸ್ವಾಗತಾರ್ಹ. ಆರೂಢಿಯ ಅರವಿಂದ ಶಾಲೆ ಹಾಗೂ ಮಧುರೆ ಹೋಬಳಿಯ ಹಲವು ಸರ್ಕಾರಿ ಶಾಲೆ ಮಕ್ಕಳಿಗೆ ಪ್ರತಿ ಶನಿವಾರ ನೋಟ್ ಪುಸ್ತಕ ಹಾಗೂ ಬ್ಯಾಗ್ ನೀಡುತ್ತಿದ್ದಾರೆ. ಅವರ ಸೇವಾ ಕೈಂಕರ್ಯ ಸದಾ ಮುಂದುವರಿಯಲಿ ಎಂದು ಆಶಿಸಿದರು. ಅರವಿಂದ ಶಾಲೆಯಲ್ಲಿ ಎಜಾಕ್ಸ್ ಕಂಪೆನಿ ಕೂಡ ಶಾಲಾ ಕೊಠಡಿ ನಿರ್ಮಿಸುತ್ತಿರುವುದು ಶ್ವಾಘನೀಯ ಎಂದರು.
ನಂದನವನ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಹುಸ್ಕೂರು ಆನಂದ್ ಮಾತನಾಡಿ, ತಾಲೂಕಿನ ಗಡಿಭಾಗದ ಸಾಸಲು ಹೋಬಳಿಯಲ್ಲಿ ಆರೂಢಿ ಕುಗ್ರಾಮವಾಗಿದೆ. ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಪ್ರೊತ್ಸಾಹ ನೀಡುವ ಸಲುವಾಗಿ ಹಾಗೂ ಕೆಂಪೇಗೌಡರ ಜಯಂತ್ಯುತ್ಸವದ ಅಂಗವಾಗಿ ಶಾಲಾಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಿಸಿದ್ದೇವೆ. ಜತೆಗೆ ಎರಡು ಕೊಠಡಿಗಳ ನಿರ್ಮಾಣಕ್ಕೂ ಶಂಕುಸ್ಥಾಪನೆ ಮಾಡಲಾಗಿದೆ. ಆರೂಢಿ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿದ್ದು, ಶೀಘ್ರದಲ್ಲೇ ಕಾರ್ಖಾನೆ ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
Kshetra Samachara
09/07/2022 10:50 pm