ಕೆ.ಆರ್.ಪುರ: ರಾಷ್ಟ್ರ ಮಟ್ಟದ ಎನ್ ಟಿಎ ಯುಜಿಸಿ ಪರೀಕ್ಷೆ ಬೆಂಗಳೂರಿನ ಬಹುತೇಕ ಭಾಗಗಳ ಸಹಿತ ಕೆ.ಆರ್. ಪುರದ ಕೇಂಬ್ರಿಡ್ಜ್ ವಿ.ವಿ. ನಲ್ಲಿ ಇಂದು ಕನ್ನಡ ಸಾಹಿತ್ಯ ಪರೀಕ್ಷೆ ಏರ್ಪಡಿಸಲಾಗಿತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕನ್ನಡ ಸಾಹಿತ್ಯ ಪರೀಕ್ಷೆ ನಡೆಯುತ್ತಿರುವ ವೇಳೆ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಬದಲು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಲಭ್ಯವಾಗಿದೆ!
ಯುಜಿಸಿಯ ಈ ಎಡವಟ್ಟಿನಿಂದಾಗಿ ಕಂಗಾಲಾದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳದೆ ಕೊಠಡಿಗಳಿಂದ ಹೊರ ನಡೆದು ಪ್ರತಿಭಟನೆ ನಡೆಸಿದರು. ಪರೀಕ್ಷಾರ್ಥಿಗಳ ಪ್ರತಿಭಟನೆಗೆ ಮಣಿದ ಯುಸಿಜಿ, ಪರೀಕ್ಷೆಯಲ್ಲಿ ಆಗಿರುವ ತಾಂತ್ರಿಕ ದೋಷ ಗಮನಿಸಿ ಪರೀಕ್ಷೆ ಮುಂದೂಡಿತು ಹಾಗೂ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಬಿಡುಗಡೆ ಮಾಡಿದ ನಂತರ ವಿದ್ಯಾರ್ಥಿಗಳೆಲ್ಲ ಪ್ರತಿಭಟನೆ ಅಂತ್ಯಗೊಳಿಸಿ ಹೊರನಡೆದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ. ಅರ್ಚನಾ ಎಂಬವರು "ಮೊದಲ ಪ್ರಶ್ನೆ ಪತ್ರಿಕೆ ಮುಗಿಸಿದ ನಂತರ 2ನೇ ಪ್ರಶ್ನೆ ಪತ್ರಿಕೆಯಲ್ಲಿ ಹತ್ತು ಕನ್ನಡ ಪ್ರಶ್ನಾವಳಿ ಬಿಟ್ಟು ಉಳಿದ ತೊಂಬತ್ತು ಪ್ರಶ್ನೆಗಳು ಹಿಂದಿ ಭಾಷೆಯಲ್ಲಿದೆ. ಬೆಂಗಳೂರಿನ ಬಹುತೇಕ ವಿವಿಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಯುಜಿಸಿ ವರ್ಗದಿಂದ ಯಾರೊಬ್ಬ ಅಧಿಕಾರಿಯನ್ನು ನೇಮಕ ಮಾಡದೇ ಇರುವುದು ದುರಂತ" ಎಂದರು.
Kshetra Samachara
26/12/2021 07:40 pm