ದೊಡ್ಡಬಳ್ಳಾಪುರ : ರಥಸಪ್ತಮಿ ದಿನದ ಅಂಗವಾಗಿ ತಾಲೂಕಿನ ಹುಲುಕುಡಿ ವೀರಭಧ್ರಸ್ವಾಮಿ ಹಾಗೂ ಪ್ರಸನ್ನ ಭಧ್ರಕಾಳಮ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು, ರಥೋತ್ಸವದಲ್ಲಿ ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದು ಪುನೀತರಾದರು.
ದೊಡ್ಡಬಳ್ಳಾಪುರ ತಾಲೂಕಿನ ಐತಿಹಾಸಿಕ ಮತ್ತು ಪ್ರಮುಖ ಪ್ರೇಕ್ಷಣಿಯ ಸ್ಥಳ ಮತ್ತು ಚಾರಣಿಗರ ಅಚ್ಚುಮೆಚ್ಚಿನ ಸ್ಥಳ ಹುಲುಕುಡಿ ಬೆಟ್ಟ, ರಥ ಸಪ್ತಮಿ ದಿನದಂದ್ದು ಕ್ಷೇತ್ರದಲ್ಲಿ ವಿಜೃಂಭಣೆಯಿಂದ ವೀರಭಧ್ರಸ್ವಾಮಿ ಹಾಗೂ ಪ್ರಸನ್ನ ಭಧ್ರಕಾಳಮ್ಮ ರಥೋತ್ಸವ ನಡೆಯುತ್ತೆ, ಇಂದು 42 ನೇ ರಥೋತ್ಸವ ಬಹಳ ಅದ್ಧೂರಿಯಾಗಿ ನಡೆಯಿತು.
ತಾಲೂಕಿನ ಭಕ್ತಾದಿಗಳಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜನ ಭಾಗವಹಿಸಿ, ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೂ ಸಹಸ್ರಾರು ಭಕ್ತಾಧಿಗಳು ಭೇಟಿ ನೀಡಿ ದರ್ಶನ ಪಡೆದರು. ದೇವಾಲಯದಲ್ಲಿ ರಥಾಂಗ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಜಾತ್ರೆ ಗೆ ಆಗಮಿಸಿದ ಭಕ್ತಾದಿಗಳಿಗೆ ಪಾನಕ ಕೋಸಂಬರಿ ನೀರು ಮಜ್ಜಿಗೆ ಯನ್ನು ವಿತರಣೆ ಮಾಡಲಾಗುತ್ತಿತ್ತು.
ದೊಡ್ಡಬಳ್ಳಾಪುರ ತಾಲೂಕಿನಿಂದ 14 ಕಿ.ಮೀ ಹಾಗೂ ಬೆಂಗಳೂರಿನಿಂದ 55 ಕಿ.ಮೀ. ದೂರದಲ್ಲಿ ಹುಲುಕುಡಿ ಬೆಟ್ಟ ಇದೆ, ವಿಜಯನಗರ ಅರಸರ ಕಾಲಾವಧಿಯಲ್ಲಿ ಹುಲುಕುಡಿ ಪ್ರಭುಗಳ ಆಡಳಿತಕ್ಕೆ ಒಳಪಟ್ಟಿತ್ತು. ಬೆಟ್ಟದ ಮೇಲೆ ಗಂಗರ-ಹೊಯ್ಸಳರ ಕಾಲಾವಧಿ ಶಾಸನಗಳು ಇವೆ. ಚೋಳರ ಕಾಲದಲ್ಲಿ ನಿರ್ಮಿಸಲಾಗಿರುವ ಸುಂದರವಾದ ವೀರಭದ್ರಸ್ವಾಮಿ ವಿಗ್ರಹವನ್ನು ಬೆಟ್ಟದ ಮೇಲಿನ ಕಲ್ಲಿನ ಗುಹಾ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.ಹುಲುಕುಡಿ ಬೆಟ್ಟದ ಸುತ್ತು ಒಟ್ಟು ಹನ್ನೊಂದು ದೇವಾಲಯಗಳಿವೆ. ಸುಮಾರು 8 ಕಿ.ಮೀ. ಸುತ್ತಳತೆ ಇರುವ ಈ ಬೆಟ್ಟವನ್ನು ಪ್ರದಕ್ಷಿಣೆ ಹಾಕಿದರೆ ಕೈಲಾಸ ಪರ್ವತವನ್ನೇ ಸುತ್ತಿದಂತ ಎನ್ನುವ ನಂಬಿಕೆ ಭಕ್ತರಲ್ಲಿದೆ.ಬೆಟ್ಟದ ಮೇಲಿನ ವೀರಭದ್ರಸ್ವಾಮಿಗೆ ಸೋಮವಾರ, ಶುಕ್ರವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯಲಿದೆ.ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳು ನಿರ್ಮಿಸಲಾಗಿದೆ.ಮೆಟ್ಟಿಲುಗಳನ್ನು ಹತ್ತುವಾಗ ಬಿಸಿಲಿಗೆ ತಡೆಯಾಗಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.ಬೆಟ್ಟದ ತುದಿಯಲ್ಲಿ ಕಲ್ಯಾಣಿ ಇದ್ದು, ಭಕ್ತರು ಕಲ್ಯಾಣಿಯಲ್ಲಿ ಮಿಂದು ದೇವರ ದರ್ಶನ ಮಾಡುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ಹುಲುಕುಡಿ ವೀರಭದ್ರಸ್ವಾಮಿ ಟ್ರಸ್ಟ್ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸೋಮವಾರ, ಶುಕ್ರವಾರ ಮತ್ತು ಭಾನುವಾರ ಅನ್ನದಾಸೋಹ ನಡೆಯುತ್ತದೆ.
PublicNext
08/02/2022 09:45 pm