ದೊಡ್ಡಬಳ್ಳಾಪುರ: ತಾಲೂಕು ಘಾಟಿ ಸುಬ್ರಮಣ್ಯ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ಧಾರ್ಮಿಕ ಕ್ಷೇತ್ರ, ಹಾಗೆಯೇ ರೈತರ ಜೀವನಾಡಿ ರಾಸುಗಳ ಜಾತ್ರೆಗೂ ಹೆಸರುವಾಸಿ. ಇದೇ ತಿಂಗಳ ಡಿಸೆಂಬರ್ 20ರಿಂದ ಘಾಟಿ ದನಗಳ ಜಾತ್ರೆ ಪ್ರಾರಂಭವಾಗಲಿದ್ದು, ಅದಕ್ಕಾಗಿ ಭರದಿಂದ ಸಿದ್ಧತೆಯನ್ನ ಮಾಡಲಾಗುತ್ತಿದೆ. ಘಾಟಿ ದನಗಳ ಜಾತ್ರೆಯಲ್ಲಿ ತಮ್ಮ ದನಗಳನ್ನ ಮಾರಲು ಮತ್ತು ಕೊಳ್ಳಲು ಸುತ್ತಮುತ್ತಲಿನ ತಾಲೂಕು ಸೇರಿದಂತೆ ಜಿಲ್ಲೆ, ರಾಜ್ಯಗಳಿಂದ ರೈತರು ಬರ್ತಾರೆ. ಹಾಗೆಯೇ ಪ್ರತಿವರ್ಷ ಜಾತ್ರೆಗೆ ಬರುತ್ತಾರೆ ದೇವನಹಳ್ಳಿಯ ತಾಲೂಕು ಅರದೇಶನಹಳ್ಳಿಯ ಮರಿಯಪ್ಪ ಮತ್ತು ಮಕ್ಕಳು.
ಮರಿಯಪ್ಪನ ಮತ್ತು ಮೊಮ್ಮಕ್ಕಳು ಘಾಟಿ ಜಾತ್ರೆಗಾಗಿಯೇ ಪ್ರತಿವರ್ಷ ನಾಲ್ಕೈದು ಎತ್ತುಗಳ ಜೋಡಿಯನ್ನ ತಯಾರಿ ಮಾಡುತ್ತಾರೆ. ಹಳ್ಳಿಕಾರ್ ತಳಿಗಳ ತವರಾದ ಮಂಡ್ಯ,ರಾಮನಗರ, ಮಾಗಡಿಯಿಂದ ಸಣ್ಣ ಕರುಗಳನ್ನ ತಂದು ಮೂರು ತಿಂಗಳು ಕರುಗಳಿಗೆ ಹಾಲು,ಮೊಸರು, ಹಿಂಡಿ, ಬುಸಾ ಕೊಟ್ಟು ಸದೃಢವಾದ ಎತ್ತುಗಳನ್ನಾಗಿ ಮಾಡುತ್ತಾರೆ. ಜಾತ್ರೆಯಲ್ಲಿ ಇದೇ ಎತ್ತುಗಳು 3 ರಿಂದ 4 ಲಕ್ಷಕ್ಕೆ ಮಾರಾಟವಾಗುತ್ತವೆ ಎನ್ನುತ್ತಾರೆ ಮರಿಯಪ್ಪನ ಮೊಮ್ಮಕ್ಕಳು.
ಘಾಟಿ ದನಗಳ ಜಾತ್ರೆ ಅಂಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆಯಿಂದ ಹಳ್ಳಿಕಾರ್ ಫ್ಯಾಷನ್ ಶೋವನ್ನು ಆಯೋಜನೆ ಮಾಡಿದ್ದು, ಈ ಕುರಿತು ಮಾತನಾಡಿದ ಆಯೋಜಕರಾದ ಹಳ್ಳಿ ರೈತ ಅಂಬರೀಶ್, ಕಳೆದ ವರ್ಷದಂತೆ ಈ ಬಾರಿಯು ಹಳ್ಳಿಕಾರ್ ಫ್ಯಾಷನ್ ಶೋವನ್ನು ಆಯೋಜನೆ ಮಾಡಿದ್ದು, ಡಿಸೆಂಬರ್ 21ರಿಂದ 24ರವರೆಗೂ ನಡೆಯಲಿದ್ದು, ಉಸ್ತುವಾರಿ ಸಚಿವರು ಫ್ಯಾಷನ್ ಶೋಗೆ ಚಾಲನೆ ನೀಡುವರು. ಹಳ್ಳಿಕಾರ್ ತಳಿಯ ರಾಸುಗಳ ಸಂರಕ್ಷಣೆ ಮತ್ತು ಅದರ ಮಹತ್ವವನ್ನ ಜನರಿಗೆ ತಿಳಿಸುವ ಕಾರಣಕ್ಕೆ ಫ್ಯಾಷನ್ ಶೋ ಆಯೋಜನೆ ಮಾಡಲಾಗಿದೆ. ಹಾಗೆಯೇ ಜಾತ್ರೆಗೆ ಬರುವ ರೈತರಿಗೆ ಉಚಿತವಾಗಿ ಮೇವು ಮತ್ತು ನೀರು ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
PublicNext
09/12/2024 01:43 pm