ಬೆಂಗಳೂರು: SORRY... SORRY.. ಎಲ್ಲಿ ನೋಡಿದ್ರೂ ಇದೊಂದೇ ಪದ. ಆ ಏರಿಯಾದ ತುಂಬೆಲ್ಲ ಪಾಗಲ್ ಪ್ರೇಮಿಯ ಹುಚ್ಚಾಟದ ಬರಹ ಸ್ಥಳೀಯರ ತಲೆ ಕೆಡಿಸಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು? ತೋರಿಸ್ತೀವಿ ನೋಡಿ...
ಕಾಲೇಜು ಗೋಡೆ ಮೇಲೂ SORRY. ಮೆಟ್ಟಿಲ ಮೇಲೂ SORRY. ರಸ್ತೆ ಮೇಲೂ SORRY. ಮನೆ ಗೋಡೆ ಮೇಲೂ SORRY. ಜೊತೆಗೆ ಹಾರ್ಟ್ ಸಿಂಬಲ್ ಬೇರೆ! ಇದೇ SORRY ಮತ್ತು ಹಾರ್ಟ್ ಸಿಂಬಲ್ ಇರೋ ಇದೇ ಬರಹ ಸುಂಕದಕಟ್ಟೆ ಜನರನ್ನು ಚಿಟ್ಟು ಹಿಡಿಸಿತ್ತು. ಮಧ್ಯರಾತ್ರಿ ಇಬ್ಬರು ಯುವಕರು ಇಷ್ಟೆಲ್ಲ ಹುಚ್ಚಾಟ ಮೆರೆದಿದ್ರು. ಒಂದು ಕಿ.ಮೀ. ವರೆಗೆ SORRY.. SORRY ಬರೆದು ಎಸ್ಕೇಪ್ ಆಗಿದ್ದಾರೆ.
ಹುಚ್ಚು ಪ್ರೇಮಿಯ ಹುಚ್ಚಾಟವಿರಬಹುದು ಅನ್ನೋ ಅನುಮಾನವನ್ನು ಜನ ವ್ಯಕ್ತಪಡಿಸಿದ್ದಾರೆ. ಆದ್ರೆ ಇದಕ್ಕೆ ಪ್ರೀತಿ ಕಾರಣನಾನೋ ಅಥವಾ ಬೇರೆಯದ್ದೋ ಗೊತ್ತಿಲ್ಲ. ಮಧ್ಯರಾತ್ರಿ ಡ್ಯೂಕ್ ಬೈಕ್ ನಲ್ಲಿ ಇಬ್ಬರು ಯುವಕರು ಬರ್ತಾರೆ. ಅದ್ರಲ್ಲಿ ಹಿಂದೆ ಕುಂತಿದ್ದ ಯುವಕ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದ. ಸ್ವಿಗ್ಗಿ ಬ್ಯಾಗ್ ನಲ್ಲಿ ಸ್ಪ್ರೇ ಪೇಯಿಂಟ್ ತಂದು ಏರಿಯಾ ಜನ ನಿದ್ದೆಗೆ ಜಾರಿರೋ ಟೈಮ್ ನಲ್ಲಿ ಇಷ್ಟೆಲ್ಲ ಅವಾಂತರ ಮಾಡಿದ್ದಾರೆ.
ಇತ್ತ ಜನ ಬೆಳಿಗ್ಗೆ ವಾಕಿಂಗ್ ಬಂದಾಗ ಎಲ್ಲೆಲ್ಲೂ ಕೆಂಪು ಬಣ್ಣದ ಸ್ಪ್ರೇ ನಿಂದ SORRY.. SORRY ಅನ್ನೋದನ್ನ ಕಂಡು ಗಾಬರಿಯಾಗಿದ್ದಾರೆ. ಕಾಲೇಜು ಎದುರಿರುವ ಮನೆ ಗೋಡೆ ಮೇಲೆಯೂ SORRY ಮಾ.. SORRY ಪಾ ಎಂದು ಗೀಚಲಾಗಿದ್ದು, ಹೃದಯದ ಸಿಂಬಲ್ ಹಾಕಿ ಬಾಣ ಬಿಡಲಾಗಿತ್ತು.
ಮಧ್ಯರಾತ್ರಿ 11ರಿಂದ 12ರ ವೇಳೆ ಬೈಕ್ ನಲ್ಲಿ ಬಂದ ಯುವಕರು ಸುಂಕದಕಟ್ಟೆಯ ಶಾಂತಿಧಾಮ ಕಾಲೇಜಿನ ಗೋಡೆ, ಮೆಟ್ಟಿಲು, ರಸ್ತೆ ಮೇಲೆಲ್ಲ SORRY ಅಂತಾ ಬರೆದು ಹೋಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಪ್ರೇಮ ಹುಚ್ಚಾಟ ಇರಬಹುದು ಎಂದು ಅನುಮಾನಿಸಲಾಗಿದೆ. ಇದೆಲ್ಲ ನೋಡಿ ಮಕ್ಕಳನ್ನು ಪೋಷಕರು ಕಾಲೇಜಿಗೆ ಕಳಿಸೋದಾದ್ರು ಹೇಗೆ? ಇದೆಲ್ಲ ನೋಡ್ತಿದ್ರೆ ನಿಜಕ್ಕೂ ಭಯ ಆಗುತ್ತೆ ಅಂತ ಜನ ಆತಂಕ ವ್ಯಕ್ತ ಪಡಿಸಿದ್ರು.
ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾಲೇಜು ಪ್ರಾಂಶುಪಾಲರಿಂದ ಮಾಹಿತಿ ಪಡೆದಿದ್ದಾರೆ. ಸಿಸಿ ಟಿವಿ ಪರಿಶೀಲಿಸಿದ್ದು, ಪಾಗಲ್ ರೋಮಿಯೋ ಯಾರು ಅನ್ನೋದನ್ನ ಪತ್ತೆ ಮಾಡಲು ಬಲೆ ಬೀಸಿದ್ದಾರೆ.
PublicNext
24/05/2022 07:14 pm