ಮನೆ ಖಾಲಿ ಇದೆಯಾ? ಎಂದು ಬಾಡಿಗೆ ಕೇಳುವ ನೆಪದಲ್ಲಿ ನಾಲ್ಕು ಜನ ಬಂದಿದ್ದಾರೆ. ಏನೋ ಬಾಡಿಗೆದಾರರು ಇರಬಹುದು ಅಂತ ಮತ್ತೊಂದು ಬಾಡಿಗೆ ಮನೆಯವರು ಅಂದ್ಕೊಂಡಿದ್ದರು. ಆದ್ರೆ ಮನೆ ನೋಡುವ ನೆಪದಲ್ಲಿ ಮನೆಯೊಳಗೆ ಬಂದವರು ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಮಟಮಟ ಮಧ್ಯಾಹ್ನ ದರೋಡೆಗೆಂದೆ ಹೊಂಚು ಹಾಕಿದ್ದ ನಾಲ್ಕು ಜನರ ಗ್ಯಾಂಗ್ ಎರಡು ಬೈಕ್‌ನಲ್ಲಿ ಬಾಡಿಗೆ ಮನೆ ಕೇಳೋ ನೆಪದಲ್ಲಿ ಬಂದಿದ್ರು. ಬಾಡಿಗೆ ಮನೆ ನೋಡಿಕೊಂಡು ಹೋಗಲು ಬಂದವರು ಅದರ ಬದಲು ಮನೆ ಇಷ್ಟ ಆಗಿದೆ. ಅಡ್ವಾನ್ಸ್ ಕೊಡುತ್ತೇವೆ ಎಂದು ಮತ್ತೊಂದು ಬಾಡಿಗೆ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದವರನ್ನ ಕೈಕಾಲು ಅದುಮಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿದ್ದಾರೆ.
ಹೌದು ಇಂತಹ ಸಿನಿಮೀಯಾ ರೀತಿಯ ಘಟನೆ ನೆಡೆದದ್ದು, ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಿಪ್ಪೇನಹಳ್ಳಿಯ ಮೈಸೂರು ಲ್ಯಾಂಪ್ಸ್ ಬಡಾವಣೆಯಲ್ಲಿ. ಸುನಂದ ಎಂಬುವರ ಮನೆಗೆ ನುಗ್ಗಿದ ನಾಲ್ಕು ಜನ ದುಷ್ಕರ್ಮಿಗಳು ಮನೆಯಲ್ಲಿನ ಚಿನ್ನಾಭರಣವನ್ನೆಲ್ಲಾ ದೋಚಿ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ. ಇನ್ನೂ ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಸುನಂದ ಬಾಡಿಗೆ ಮನೆಯಲ್ಲಿದ್ದು, ಮತ್ತೊಂದು ಮಹಡಿಯಲ್ಲಿದ್ದ ಖಾಲಿ ಮನೆಯನ್ನ ವಿಚಾರಿಸಲು 4 ಜನ ಮುಂಜಾನೆಯೊಮ್ಮೆ ಬಂದು ನೋಡ್ಕೊಂಡು ಹೋಗಿದ್ರು. ಮನೆಯಲ್ಲಿ ಕೇವಲ ಮಹಿಳೆಯರೇ ಇದ್ದುದ್ದನ್ನ ಕನ್ಫರ್ಮ್ ಮಾಡಿಕೊಂಡ ಆ ಗ್ಯಾಂಗ್ ಮಧ್ಯಾಹ್ನ ಮತ್ತೆ ಅಡ್ವಾನ್ಸ್ ಮಾಡುತ್ತೇವೆ ಎಂದು ಬಂದಿದ್ದರು. ಸರಿ ಮನೆಯೊಳಗೆ ಬನ್ನಿ ಎನ್ನುತ್ತಿದ್ದಂತೆ ಮೃಗೀಯವಾಗಿ ಅವರ ಮೇಲೆರಗಿದ ಆ ಗ್ಯಾಂಗ್ ಮನೆ ಮಾಲಕಿ ಸುನಂದಮ್ಮ ಸೇರಿದಂತೆ ಅವರ ಮನೆಗೆ ಬಂದಿದ್ದ ಸಂಬಂಧಿ ಶ್ವೇತಾ ಹಾಗೂ ಮತ್ತಿಬ್ಬರನ್ನು ಕೆಳಗೆ ಬೀಳಿಸಿ ಎದೆ ಮೇಲೇರಿ ಮನೆಯಲ್ಲಿದ್ದ ಮಗುವನ್ನೂ ಸಹ ಹಿಂಸಿಸಿ ಮೈಮೇಲಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಸಿದಿದ್ದಾರೆ. ಅಲ್ಲದೆ ಮಗುವಿನ ಚೀರಾಟ ಕೇಳಿ ಪಕ್ಕದ ಮನೆಯವರು ಈ ಮನೆ ಕಡೆ ಗಮನಿಸುತ್ತಿದ್ದಂತೆ ಮನೆಯಿಂದ ಓಟ ಕಿತ್ತಿದ್ದಾರೆ.
ಸದ್ಯ ಘಟನೆ ಸಂಬಂಧ ಪೀಣ್ಯ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡಿದ್ದು, ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಕೆಲ ಸಿಸಿ ಕ್ಯಾಮೆರಾಗಳನ್ನ ಸಹ ಪರಿಶೀಲಿಸಿದ್ದು, ಕೆಲವರನ್ನ ವಿಚಾರಣೆ ನಡೆಸುತ್ತಿದ್ದಾರೆ.
PublicNext
28/06/2022 01:46 pm