ಬೆಂಗಳೂರು: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಹಗರಣದಲ್ಲಿ ಸಚಿವರು ಹಾಗೂ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿಬಂದಿತ್ತು. ಇದುವರೆಗೆ ಸೆರೆಹಿಡಿದಿರುವ ಆರೋಪಿಗಳು ಕಿಂಗ್ ಪಿನ್ ಗಳಲ್ಲ. ಅಕ್ರಮ ಜಾಲದಲ್ಲಿ ದೊಡ್ಡವರ ಕೈವಾಡವಿದೆ. ಕೂಡಲೇ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ರಾಜ್ಯ ವಕೀಲ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ನೇತೃತ್ವದ ನಿಯೋಗ ಸಿಐಡಿಗೆ ದೂರು ನೀಡಿ ಆಗ್ರಹಿಸಿದೆ.
ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿ ಬಳಿ ವಕೀಲರ ನೇತೃತ್ವದ ನಿಯೋಗವು ದೂರು ನೀಡಿತು. ಇದಕ್ಕೂ ಮುನ್ನ ಕಾರ್ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ತಿಳಿಗೊಂಡ ಬಳಿಕ ಸಿಐಡಿ ಅಧಿಕಾರಿಯೊಬ್ಬರನ್ನು ಪ್ರವೇಶದ್ವಾರದಲ್ಲೇ ಕರೆಯಿಸಿ ದೂರು ಸ್ವೀಕರಿಸುವಂತೆ ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎ.ಪಿ.ರಂಗನಾಥ್ ಪಿಎಸ್ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷಾ ಅಕ್ರಮ ಪ್ರಕರಣಗಳ ಹಿಂದೆ ಬಂಧಿಸಿರುವ ಆರೋಪಿಗಳು ಅಂದುಕೊಂಡಂತೆ ಕಿಂಗ್‌ಪಿನ್ ಗಳಲ್ಲ. ಕೇವಲ ಮಧ್ಯವರ್ತಿಗಳು ಮಾತ್ರ.ಇವರ ಹಿಂದೆ ಹಾಲಿ ಸಚಿವರಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಭಾಗಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಯಿದೆ ಎಂದರು.
ಆಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಒಎಂಆರ್ ಶೀಟ್ ಬದಲಾಯಿಸಿ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಹೀಗಾಗಿ ಪ್ರಕರಣ ರುವಾರಿ ಎನ್ನಿಸಿಕೊಂಡಿರುವ ಅಶ್ವಥ್ ನಾರಾಯಣ್ ಅವರನ್ನ ಸಂಪುಟದಿಂದ ಕೈ ಬಿಡಬೇಕು. ಕಮೀಷನರ್ ಆಸೆಗಾಗಿ ಅಮೃತ್ ಪೌಲ್ ಹಗರಣದಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಇವರ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು. ಅಲ್ಲದೆ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಬಗ್ಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ ಖರ್ಗೆಗೆ ನೋಟಿಸ್ ಕೊಡುತ್ತಾರೆ ಟ್ವೀಟ್ ವಿಚಾರಕ್ಕೆ ನಟ ಚೇತನ್ ಮೇಲೆ ಕೇಸ್ ಹಾಕ್ತಾರೆ. ಅಮೃತ್ ಪೌಲ್ ಕಮೀಷನರ್ ಆಗಲಿಕ್ಕೆ ಅಶ್ವಥ್ ನಾರಾಯಣ್ ಹಾಗೂ ಮಾಜಿ ಮುಖ್ಯಮಂತ್ರಿ ಮಗನ ಮಾತನ್ನ ಕೇಳಿದ್ದಾರೆ. ಇಷ್ಟು ದೊಡ್ಡ ಹಗರಣದಲ್ಲಿ ಭಾಗಿಯಾದರೂ ಪ್ರಭಾವಿಗಳನ್ನ ಬಂಧಿಸದಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ ಎಂದರು.
PublicNext
04/05/2022 03:45 pm