ಬೆಂಗಳೂರು: ಆನ್‌ಲೈನ್ ಆಹಾರ ಮಾರಾಟಕ್ಕೆ ಬೀದಿ ಬದಿಯ ಆಹಾರ ಮಾರಾಟಗಾರರು ಪ್ರವೇಶಿಸುವ ಸಲುವಾಗಿ ಬಿಬಿಎಂಪಿ ಹೊಸ ಯೋಜನೆ ತರಲು ಮುಂದಾಗಿದೆ. ಇಷ್ಟು ದಿನ ಹೋಟೆಲ್‌ಗಳ ತಿಂಡಿ ತಿನಿಸುಗಳನ್ನು ಆಫ್ ಲೈನ್‌ನಲ್ಲಿ ಡೆಲಿವರಿ ಪಡೆಯುತ್ತಿದ್ದ ಸಿಲಿಕಾನ್ ಸಿಟಿ ಜನರಿಗೆ ಬೀದಿ ಬದಿಯ ಆಹಾರವೂ ಸಿಗುವಂತಹ ಯೋಜನೆ ಇದಾಗಿದೆ.
ಅನೇಕ ಜನರಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ ಜೊಮಾಟೋದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಅಂತಹದ್ದೊಂದು ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ. ಸ್ವಿಗ್ಗಿ, ಜೊಮಾಟೋ ಸೇರಿದಂತೆ ಆಹಾರ ಸರಬರಾಜು ಆ್ಯಪ್‌ಗಳು ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆ ಜಾರಿಗೆ ತರಲು ಮುಂದಾಗಿದ್ದೇವೆ ಎಂದು ಪಾಲಿಕೆ ವಿಶೇಷ ಆಯುಕ್ತ ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ಬೀದಿಬದಿ ಆಹಾರ ಮಾರಾಟಗಾರರಿಗೆ 3 ತರಬೇತಿ ನೀಡಲಾಗುತ್ತಿದೆ. ಇದರಿಂದ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಹಾರ ಪಾದರ್ಥಗಳನ್ನೂ ಮುಂದಿನ ದಿನಗಳಲ್ಲಿ ಅನ್ ಲೈನ್ ಅಪ್ ಮುಖಾಂತರ ಮಾರಾಟ ಮಾಡಬಹುದಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬಳಸಿಕೊಂಡು ನಗರದಲ್ಲಿನ ಬೀದಿ ಬದಿಯ ಅಹಾರ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶ ಪಾಲಿಕೆಯದ್ದಾಗಿದೆ. ಈ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದೆ. ನಗರದಲ್ಲಿ ಬೀದಿ ಬದಿಯ ಅಹಾರ ಮಾರಾಟಗಾರರ ಲೆಕ್ಕ ಮಾಡಿ ಇವರುಗಳಿಗೆ ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು, ಗ್ರಾಹಕರಿಗೆ ಆಹಾರ ನೀಡಬೇಕಾದಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಜತೆಗೆ ಆಹಾರ ಮಾರಾಟಗಾರರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.
7 ದಿನಗಳ ತರಬೇತಿ ಶಿಬಿರ:
ಒಟ್ಟು 7 ದಿನಗಳ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ ವ್ಯಯಿಸಲಿದೆ. ಆ ಹಣವನ್ನು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ನೀಡಲಾಗಿರುವ ಅನುದಾನದಿಂದ ಪಡೆಯಲಾಗುತ್ತದೆ ಅಂತ ವಿಶೇಷ ಆಯುಕ್ತರು ತಿಳಿಸಿದ್ದಾರೆ.
ಆಗಸ್ಟ್ 15ಕ್ಕೆ ಜಾರಿ:
ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೇ ನಡೆಸಲಾಗುತ್ತಿದೆ. ಸದ್ಯದ ಮಾಹಿತಿಯಂತೆ ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರು ಇದ್ದಾರೆ. ಬೀದಿ ಬದಿ ಆಹಾರ ಮಾರಾಟಗಾರರ ಆಹಾರವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಎರಡು ಲಕ್ಷ ಸಾಲ ನೀಡಲು ಮುಂದಾಗಿದ್ದೇವೆ. ಆಗಸ್ಟ್ 15ಕ್ಕೆ ಈ ಹೊಸ ಯೋಜನೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ರಾಮ್ ಪ್ರಸಾದ್ ಮನೋಹರ್ ಮಾಹಿತಿ ನೀಡಿದ್ದಾರೆ.
Kshetra Samachara
09/07/2022 12:38 pm