ಬೆಂಗಳೂರು: ನಾಡಹಬ್ಬ ದಸರಾ ಬಂತು ಎಂದರೆ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ಅದರಲ್ಲೂ ಮಕ್ಕಳಿರುವ ಮನೆಗಳಲ್ಲಿ ಸಂಭ್ರಮ ಸ್ವಲ್ಪ ಜಾಸ್ತಿಯೇ ಇರುತ್ತದೆ. ಇದಕ್ಕೆ ಕಾರಣ ಮನೆಗಳಲ್ಲಿ ಗೊಂಬೆಗಳನ್ನು ಇಡುವುದು. ದಸರಾ ಸಂಭ್ರಮಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಮಾರ್ಕೆಟ್ ನಲ್ಲಿ ಬಣ್ಣ ಬಣ್ಣದ ಗೊಂಬೆಗಳು ರಾರಾಜಿಸುತ್ತಿದೆ.
ದಸರಾ ಹಬ್ಬ ಕರುನಾಡ ಜನಮನದ ಧಾರ್ಮಿಕವಾಗಿಯೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಬಹಳ ಹತ್ತಿರವಾದ ಹಬ್ಬ. ಮೈಸೂರು ದಸರಾದಲ್ಲಿ ಆನೆ ಅಂಬಾರಿ ಏರಿ ಲೋಕ ಅವಲೋಕಿಸುವ ಶ್ರೀ ಚಾಮುಂಡೇಶ್ವರಿ ದೇವಿ, ಅರಮನೆಯ ಸಡಗರವಷ್ಟೇ ಅಲ್ಲದೆ, ಮನೆ- ಮನೆಗಳಲ್ಲಿ ಕೂರಿಸುವ ಗೊಂಬೆಗಳು ಕೂಡ ದಸರಾ ವಿಶೇಷವೂ ಹೌದು.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಗೊಂಬೆ ಹಬ್ಬ ಜನಪ್ರಿಯ. ದಸರಾದಲ್ಲಿ ಗೊಂಬೆ ಕೂರಿಸುವ ಪದ್ಧತಿ 18ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿದೆ. ಗೊಂಬೆ ಕೂರಿಸುವ ಪದ್ಧತಿ ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು. ಮೈಸೂರು ಅರಮನೆಯಲ್ಲಿ ಹಬ್ಬ ನಡೆದರೆ, ಪ್ರಜೆಗಳೆಲ್ಲರ ಮನೆಯಲ್ಲಿಯೂ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು.
ಮನೆಗಳಲ್ಲಿ ಗೊಂಬೆ ಕೂರಿಸುವಾಗ ಸ್ಥಳಾವಕಾಶ ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಗೊಂಬೆಗಳು ಇದ್ದವರು 9 ಹಂತಗಳಲ್ಲಿ ಕೂರಿಸಿದರೆ, ಇನ್ನು ಕೆಲವರು 7 ಹಂತಗಳಲ್ಲಿ, ಕೆಲವರು 5 ಹಂತಗಳಲ್ಲಿ ಕೂರಿಸುತ್ತಾರೆ. ಗೊಂಬೆಗಳನ್ನು ಕೂರಿಸಲು ಮರದ ಸ್ಟ್ಯಾಂಡ್ ಬಳಸುತ್ತಾರೆ. ಮರದ ಸ್ಟ್ಯಾಂಡ್ ಇಲ್ಲದಿದ್ದರೆ ಸ್ಟೀಲ್ ಸ್ಟ್ಯಾಂಡನ್ನೂ ಬಳಸಬಹುದು. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪ ಇಟ್ಟು, ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸುತ್ತಾರೆ.
ಇತ್ತೀಚೆಗೆ ಹಳೆ ಸಂಪ್ರದಾಯದ ಗೊಂಬೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಲಾಗುತ್ತದೆ. ಮರದ, ಮಣ್ಣಿನ ಗೊಂಬೆ ಜೊತೆಗೆ ಇತ್ತೀಚೆಗೆ ಕಾಗದಗಳಿಂದ ತಯಾರಾದ ಆಕರ್ಷಕ ಗೊಂಬೆಗಳೂ ಮಾರುಕಟ್ಟೆಯಲ್ಲಿ ಸಿಗುತ್ತವೆ.
PublicNext
23/09/2022 09:26 pm