ಬೆಂಗಳೂರು: ನಮ್ಮ ರಾಜ್ಯ ಹಾಗೂ ಬೆಂಗಳೂರು ನಗರ ಐಟಿ ಕ್ಯಾಪಿಟಲ್, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಎಜುಕೇಶನ್ ಹಬ್ ಎಂದು ಖ್ಯಾತಿ ಪಡೆದಿದೆ. ಇದಕ್ಕೆ ಹಲವರ ಕೊಡುಗೆ ಇದೆ. ಆದರೆ ಈಗ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ‘ದೇಶದ ಭ್ರಷ್ಟಾಚಾರದ ರಾಜಧಾನಿ’ ಎಂದು ಕುಖ್ಯಾತಿ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ 40% ಸರ್ಕಾರ- ಬಿಜೆಪಿ ಅಂದ್ರೆ ಭ್ರಷ್ಟಾಚಾರ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿಚಾರದಲ್ಲಿ ಮಾಧ್ಯಮಗಳು ನಮಗಿಂತ ಹೆಚ್ಚಿನ ತನಿಖೆ ಮಾಡಿದ್ದು, ನಿಮಗೆ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. ಆದರೆ ಈ ಡಬಲ್ ಇಂಜಿನ್ ಸರ್ಕಾರ ಬಂದ ನಂತರ ದೆಹಲಿಯಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬ ಪಟ್ಟಿಯನ್ನು ಸರ್ಕಾರ ನೀಡಲಿ ಎಂದರು.
ಬೇರೆ ರಾಜ್ಯಗಳಲ್ಲಿ ಪ್ರವಾಹ ಬಂದಾಗ ಖುದ್ದು ವೀಕ್ಷಣೆ ಮಾಡುವ ಪ್ರಧಾನಿಗಳು ನಮ್ಮ ರಾಜ್ಯ ಸತತವಾಗಿ ಪ್ರವಾಹದಿಂದ ತತ್ತರಿಸುತ್ತಿದ್ದರೂ ಈ ಕಡೆ ತಿರುಗಿ ನೋಡಿಲ್ಲ. ನಮ್ಮ ರಾಜ್ಯಕ್ಕೆ ನೀಡಬೇಕಾಗಿದ್ದ ನ್ಯಾಯ ನೀಡಲಿಲ್ಲ. ಪ್ರಧಾನಮಂತ್ರಿಗಳು ಬೆಂಗಳೂರಿಗೆ ಬಂದು ಸಬ್ ಅರ್ಬನ್ ರೈಲು ಯೋಜನೆ ಉದ್ಘಾಟಿಸಿ ಹೋದರು. ಈ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಜಾಹೀರಾತಿನಲ್ಲೇ ಉಳಿದಿದೆಯೇ ಹೊರತು ಚಾಲ್ತಿ ಆಗಲಿಲ್ಲ ಎಂದರು.
ಈ ಸರ್ಕಾರ ಬಂದ ನಂತರ ರಾಜ್ಯಕ್ಕೆ ಯಾವುದಾದರೂ ರಾಷ್ಟ್ರೀಯ ಯೋಜನೆ ನೀಡಿದ್ದೀರಾ? ಇಲ್ಲ. ಆದರೆ ಈ ಸರ್ಕಾರಕ್ಕೆ ಭ್ರಷ್ಟಾಚಾರದ ಹೆಸರು ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಎಲ್ಲ ಹುದ್ದೆಗಳಿಗೂ ಒಂದೊಂದು ದರ ನಿಗದಿ ಮಾಡಿದ್ದೀರಿ. ಸರ್ಕಾರಿ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಂತೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
PublicNext
13/09/2022 10:52 pm