ಬೆಂಗಳೂರು: ಹಾಫ್ ಹೆಲ್ಮೆಟ್ ಧರಿಸದಂತೆ ನಗರದಾದ್ಯಂತ ಸಂಚಾರಿ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸಿಗ್ನಲ್, ಜಂಕ್ಷನ್, ಇನ್ನಿತರ ಸ್ಥಳಗಳಲ್ಲಿ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆಯೂ ಬೈಕ್ ಸವಾರರಿಗೆ ತಿಳಿ ಹೇಳುತ್ತಿದ್ದಾರೆ.
ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವಂತೆಯೂ ಹೇಳುವ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ವಿರೋಧ ಅಳಿಸಿಹಾಕಲು ಪೊಲೀಸ್ ಇಲಾಖೆಯು ಲಾ ಅಂಡ್ ಅರ್ಡರ್ ಹಾಗೂ ಸಂಚಾರಿ ಪೊಲೀಸರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ತಾಕೀತು ಮಾಡಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಹಾಫ್ ಹೆಲ್ಮೆಟ್ ಧರಿಸಿ ಬರುವ ಪೊಲೀಸರಿಗೂ ಜಾಗೃತಿ ಮೂಡಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಪೊಲೀಸರ ಬೈಕ್ ಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಳೆದ ಆರು ದಿನಗಳಿಂದಲೂ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಜನಸಾಮಾನ್ಯರಿಗೆ ಬುದ್ಧಿ ಹೇಳುವ ಪೊಲೀಸರೇ ನಿಯಮ ಉಲ್ಲಂಘಿಸಿದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಐಎಸ್ಐ ಮಾರ್ಕ್ ಇರುವ ಪೂರ್ತಿ ಕವರ್ ಆಗುವ ಪೂರ್ಣ ಹೆಲ್ಮೆಟ್ ಧರಿಸಲು ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ಸೂಚಿಸಿದ್ದಾರೆ.
PublicNext
20/09/2022 12:48 pm