ಬೆಂಗಳೂರು: ಅರ್ಹತೆ ಇಲ್ಲದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಪೊಲೀಸರು ಐವರು ಅಧಿಕಾರಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಲ್ಲಿ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರು, ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಇದ್ದಾರೆ.
1)ಗೀತಾ-ನಿರ್ದೇಶಕರು, ಸಮಗ್ರ ಶಿಕ್ಷಣ ಅಭಿಯಾನ
2)ಮಾದೇಗೌಡ-ನಿರ್ದೇಶಕ ಪಠ್ಯ ಪುಸ್ತಕಗಳು
3)ಜಿ ಆರ್ ಬಸವರಾಜ- ನಿವೃತ್ತ ಜಂಟಿ ನಿರ್ದೇಶಕ
4)ಕೆ.ರತ್ನಯ್ಯ,-ನಿವೃತ್ತ ಜಂಟಿ ನಿರ್ದೇಶಕ
5)ಡಿ.ಕೆ.ಶಿವಕುಮಾರ-ನಿವೃತ್ತ ಜಂಟಿ ನಿರ್ದೇಶಕ
ಬಂಧಿತರನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ ಸಿಐಡಿ ಅಕ್ಟೋಬರ್ 1ರ ವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದೆ. ಈ ಮೂಲಕ ಬಂಧಿತರ ಸಂಖ್ಯೆ ಐವರು ಸೇರಿ 21ಕ್ಕೆ ಏರಿಕೆಗಿದೆ.2012-13ನೇ ಮತ್ತು 2014-15ನೇ ಸಾಲಿನಲ್ಲಿ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿತ್ತು. ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, 15 ಶಿಕ್ಷಕರು ಮತ್ತು ಎಫ್ ಡಿಎ ಪ್ರಸಾದ್ ಎಂಬಾತನ್ನು ಬಂಧಿಸಿದೆ.
ಹೆಚ್ಚಿನ ತನಿಖೆ ಸಲುವಾಗಿ ಪ್ರಸಾದ್‌ನನ್ನು ಕಸ್ಟಡಿಗೆ ಪಡೆದು ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ನೇಮಕಾತಿ ಇಡೀ ರಾಜ್ಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿತ್ತು.ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಪ್ರಸಾದ್, ಅಭ್ಯರ್ಥಿಗಳನ್ನು ಸಂಪರ್ಕ ಮಾಡಿ ಮೇಲಧಿಕಾರಿಗಳ ಮೂಲಕ ಡೀಲ್ ಮುಗಿಸಿದ್ದ ವಿಷಯ ಬಾಯ್ಬಿಟ್ಟಿದ್ದ.
ಪ್ರತಿ ಅಭ್ಯರ್ಥಿಯಿಂದ 10 ರಿಂದ 15 ಲಕ್ಷ ರೂ. ಪಡೆದು ನೌಕರಿ ಕೊಡಿಸುವುದು ಬೆಳಕಿಗೆ ಬಂದಿತ್ತು. ಇದರ ಜಾಡು ಹಿಡಿದು ತನಿಖೆ ಮುಂದುವರಿಸಿದ ಸಿಐಡಿ ಅಧಿಕಾರಿಗಳು, ಶಿಕ್ಷಣ ಇಲಾಖೆ ನೇಮಕಾತಿ ವಿಭಾಗದ ಬೆಂಗಳೂರು ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಂಟಿ ನಿರ್ದೇಶಕರು ಅಕ್ರಮ ಎಸಗಿರುವುದು ಸಾಕ್ಷ್ಯ ಸಮೇತ ದೃಢವಾಗಿತ್ತು. ಇದರ ಆಧಾರದ ಮೇಲೆ ಸಿಐಡಿ ಬಂಧಿಸಿದೆ.
PublicNext
26/09/2022 10:26 pm