ಹುಬ್ಬಳ್ಳಿ: ಹುಬ್ಬಳ್ಳಿಯ ಟೌನ್‌ಹಾಲ್ ಬಳಿಯಲ್ಲಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಅಂಗಡಿಯೊಳಗೆ ನುಗ್ಗಿ ಮಾಲೀಕ ಹಾಗೂ ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಆಟೋ ಚಾಲಕರ ಸಂಘದ ಅಧ್ಯಕ್ಷ ಮೆಚ್ಚುಗೆ ಸೂಚಿಸಿದ್ದಾರೆ.
ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೌನ್‌ಹಾಲ್ ಬಳಿಯಲ್ಲಿರುವ ಸ್ತುತಿ ಸೀಟ್ ಕವರ್ ಅಂಗಡಿ ಎದುರು ನಿಲ್ಲಿಸಿದ್ದ ಆಟೋ ತೆಗೆಯುವಂತೆ ಹೇಳಿದಕ್ಕೆ ಆಕ್ರೋಶಗೊಂಡ ಕೆಲ ಪುಡಿರೌಡಿಗಳು ಸೀಟ್ ಕವರ್ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ, ಹಲ್ಲೆ ಮಾಡಿದ್ದರು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಸುದ್ದಿ ಪ್ರಸಾರವಾಗಿದ್ದೇ ತಡ ಶಹರ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನ ಪತ್ತೆಹಚ್ಚಿ, ಕಂಬಿ ಹಿಂದೆ ಕಳುಹಿಸಿದ್ದಾರೆ.
ಆಟೋ ಚಾಲಕ ಈ ರೀತಿ ತೋರಿದ ಹಿನ್ನೆಲೆಯಲ್ಲಿ ಚಾಲಕರ ಸಂಘದವರು ಕೂಡ ಬೇಸರ ವ್ಯಕ್ತಪಡಿಸಿದ್ದು, ನಾವುಗಳು ಹೊಟ್ಟೆ ಪಾಡಿಗಾಗಿ ಆಟೋ ಚಲಾಯಿಸುತ್ತೇವೆ, ಆದರೆ ಇಂತಹ ಕೆಲವು ಪುಡಿರೌಡಿಗಳಿಂದ ಆಟೋ ಚಾಲಕರಿಗೆ ಕೆಟ್ಟ ಹೆಸರು, ಈ ರೀತಿ ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದರು. ಅಲ್ಲದೇ ಇಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡುತ್ತೇವೆ ಅಂತಾ ಅಧ್ಯಕ್ಷ ಶೇಕರಯ್ಯ ಮಠಪತಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿ ಸಂಯಮದಿಂದ ಇರೋದನ್ನು ಬಿಟ್ಟು, ಈ ರೀತಿ ರೌಡಿಗಳಂತೆ ಹಲ್ಲೆ ನಡೆಸುವ ಕೃತ್ಯಕ್ಕೆ ಮುಂದಾದ ಅಸ್ಲಂ, ರಸೂಲ್ ಹಾಗೂ ಅಶ್ರಫ್ ಎಂಬಾತ ಆರೋಪಿಗಳು ಇದೀಗ ಜೈಲು ಪಾಲಾಗಿದ್ದಾರೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2025 10:00 pm