ಬೆಂಗಳೂರು: ಹಣಕಾಸು ವಿಚಾರಕ್ಕೆ ಹೆಂಡತಿಗೆ ನಿದ್ರೆ ಮಾತ್ರೆ ನೀಡಿ ಮಲಗಿರುವಾಗಲೇ ಕತ್ತು ಹಿಸುಕಿ ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಚೇತನಾಳನ್ನ (42) ಹತ್ಯೆ ಮಾಡಿದ ಆರೋಪದಡಿ ಪತಿ ಶರತ್ (43) ಎಂಬುವನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತಳ ಸಂಬಂಧಿ ಶ್ರೀಅಕ್ಷಯ್ ಎಂಬುವರು ನೀಡಿದ ದೂರು ನೀಡಿದ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಶರತ್, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 15 ವರ್ಷಗಳ ಹಿಂದೆ ಪ್ರೇಮವಿವಾಹವಾಗಿದ್ದ ಈ ದಂಪತಿಗೆ ಮುದ್ದಾದ ಹೆಣ್ಣು ಮಗುವಿದೆ.
ಕಳೆದೊಂದು ವರ್ಷದಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇಬ್ಬರಿಗೂ ಕೈತುಂಬಾ ಸಂಬಳ ಬರುತಿತ್ತು. ಏತನ್ಮಧ್ಯೆ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತಿತ್ತು.
ಫೆ.3ರಂದು ದಂಪತಿ ನಡುವೆ ಮತ್ತೆ ಗಲಾಟೆಯಾಗಿದೆ. ಜ್ವರದ ಮಾತ್ರೆ ಸೋಗಿನಲ್ಲಿ ಪತ್ನಿಗೆ ನಿದ್ರೆ ಮಾತ್ರೆ ನೀಡಿದ್ದ. ಬಳಿಕ ಗಾಢನಿದ್ರೆಯಲ್ಲಿದ್ದ ಪತ್ನಿಯನ್ನ ಕತ್ತು ಹಿಸುಕಿ ಪತಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿ ಕಥೆ ಕಟ್ಟಿದ್ದ ಆರೋಪಿ ಫೆಬ್ರವರಿ 3ರಂದು ಪತ್ನಿಗೆ ಸುಸ್ತು ಹಾಗೂ ತಲೆ ಸುತ್ತು ಬಂದಿದೆ ಎಂದು ಪತ್ನಿ ಚೇತನಾ ತನ್ನ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಜ್ವರದ ಮಾತ್ರೆ ನೀಡಿದೆ. ರಾತ್ರಿ ಎಂದಿನಂತೆ ಮಲಗಿದ್ದಳು. ಮಧ್ಯರಾತ್ರಿ 2.30ಕ್ಕೆ ಪಕ್ಕದಲ್ಲಿ ಮಲಗಿದ್ದ ಹೆಂಡತಿಯು ಮಂಚದಿಂದ ಕೆಳಗೆ ಬಿದ್ದಿದ್ದಳು. ಕೂಡಲೇ ಮಗಳನ್ನ ಎಬ್ಬಿಸಿ, ನೆಲಮಹಡಿಯಲ್ಲಿ ವಾಸವಿದ್ದವರ ಸಹಾಯದಿಂದ ಕೂಡಲೇ ಖಾಸಗಿ ಆಸ್ಪತ್ರೆ ಸೇರಿಸಿದರೂ ಮಾರ್ಗಮಧ್ಯೆ ಪತ್ನಿ ಸಾವನ್ನಪ್ಪಿರುವುದಾಗಿ ಸಂಬಂಧಿಕರ ಮುಂದೆ ಸುಳ್ಳು ಹೇಳಿದ್ದ. ಮೃತದೇಹ ಪರಿಶೀಲಿಸಿದಾಗ ಕುತ್ತಿಗೆ ಹಾಗೂ ಗಲ್ಲದಲ್ಲಿ ತರಚಿದ ಗಾಯವಿರುವುದನ್ನ ಮೃತಳ ಮನೆಯವರು ಗಮನಿಸಿದ್ದರು.
ಉದ್ದೇಶಪೂರ್ವಕವಾಗಿ ಚೇತನಾಳನ್ನ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ವಿಚಾರಣೆಗೊಳಪಡಿಸಿದಾಗ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
05/02/2025 09:19 pm