ಧಾರವಾಡ: ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ತಮ್ಮ ಅಭಿವೃದ್ಧಿಗಾಗಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಮುಂದೆ ಬಂದಲ್ಲಿ ಸರ್ಕಾರದಿಂದ ಮತ್ತು ತಮ್ಮ ಫೌಂಡೇಶನ್ ಮೂಲಕ ಅಗತ್ಯ ನೆರವು ನೀಡುವುದಾಗಿ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲ ವರ್ಣಗಳಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ತಮ್ಮ ಅನುಭವ ಮಂಟಪದಲ್ಲಿ ಪ್ರತಿ ಸಮಾಜ ಅಥವಾ ವೃತ್ತಿಗಳ ಪ್ರತಿನಿಧಿಯಾಗಿ ಇವರನ್ನು ಆಹ್ವಾನಿಸಿ, ಸಮಾನತೆ ಸಾಧಿಸಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನವನ್ನು ನಮಗೆ ನೀಡುವ ಮೂಲಕ ಎಲ್ಲರಲ್ಲೂ ಸಮಾನತೆ ತಂದಿದ್ದಾರೆ. ಸವಿತಾ ಸಮಾಜ ಸಣ್ಣ ಸಮಾಜ. ಕಾಯಕನಿಷ್ಠ ಸಮಾಜ. ಯಾವುದೇ ರೀತಿಯ ಬೇಡಿಕೆ, ಸೌಲಭ್ಯಗಳು ಅಗತ್ಯವಿದ್ದಲ್ಲಿ ಸಂಘಟಿತರಾಗಿ ಸರ್ಕಾರದ ಗಮನ ಸೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣ ಎಂ.ಉಪ್ಪೇರ, ಧಾರವಾಡ ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಪರಶುರಾಮ ಬದ್ದೆಪಲ್ಲೆ, ಖಜಾಂಚಿ ಮೋಹನ ಗೋಲಿ, ಮುಖಂಡರಾದ ಬುಚ್ಚಣ್ಣ ಮುಶ್ರಿಪಲ್ಲೆ, ಎಸ್.ಆರ್.ಪಾಟೀಲ, ಜೀವನ್ ಇದ್ದರು.
ಇದೇ ಸಂದರ್ಭದಲ್ಲಿ ಸಚಿವರು ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಿದರು.
Kshetra Samachara
05/02/2025 08:17 pm