ಚಾಮರಾಜನಗರ : ಕಿವಿ ಚುಚ್ಚಲು ಅನಸ್ತೇಷಿಯಾ ಚುಚ್ಚುಮದ್ದು ನೀಡಿದ ಹಿನ್ನೆಲೆ ಆರು ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ತಾಲೂಕಿನ ಹಂಗಳ ಗ್ರಾಮ ಆನಂದ್-ಶುಭ ದಂಪತಿಯ ಆರು ವರ್ಷದ ಗುಂಡು ಮಗು ಅಸುನೀಗಿದೆ. ಬಾಣಂತನಕ್ಕೆ ತಾಯಿ ಶುಭ ಸ್ವಗ್ರಾಮ ಶೆಟ್ಟಹಳ್ಳಿಯಲ್ಲಿದ್ದರು. ಕಿವಿ ಚುಚ್ಚಿಸುವ ಸಲುವಾಗಿ ಮಗುವನ್ನು ಬೊಮ್ಮಲಾಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯ ಡಾ.ನಾಗರಾಜು ಮಗುವಿನ ಎರಡು ಕಿವಿಗಳಿಗೆ ಅನಸ್ತೆಷಿಯಾ ಚುಚ್ಚುಮದ್ದು ನೀಡಿದ್ದಾರೆ. ಈ ವೇಳೆ ಓವರ್ ಡೋಸ್ ಆಗಿದ್ದು, ಮಗುವಿನ ಬಾಯಿಯಲ್ಲಿ ನೊರೆ ಬಂದು ಪ್ರಜ್ಞಾಹೀನ ಸ್ಥಿತಿ ತಲುಪಿದೆ. ನಂತರ ವೈದ್ಯರು ತಾಲೂಕು ಆಸ್ಪತ್ರೆಗೆ ಕರೆದೋಯ್ಯಿರಿ ಎಂದು ಸೂಚನೆ ನೀಡಿದರು. ಆದರೆ ಬೊಮ್ಮಲಾಪುರ ಆಸ್ಪತ್ರೆಯಲ್ಲಿಯೇ ಮಗು ಅಸುನೀಗಿದೆ. ಇದಕ್ಕೆ ವೈದ್ಯರ ಎಡವಟ್ಟೆ ಕಾರಣ ಎಂದು ಪೋಷಕರು ದೂರಿದ್ದಾರೆ. ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿನ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮನ ಕಲಕುವಂತಿತ್ತು.
ಬೊಮ್ಮಲಾಪುರ ಆಸ್ಪತ್ರೆ ವೈದ್ಯರು ಕಿವಿ ಚುಚ್ಚಲು ಮುಂಜಾಗ್ರತಾ ಕ್ರಮ ಅನುಸರಿಸದೆ ಎರಡು ಕಿವಿಗೆ ಅನಸ್ತೇಷಿಯಾ ಕೊಟ್ಟಿದ್ದಾರೆ. ಜತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು 200 ರೂ. ಹಣ ಪಡೆದುಕೊಂಡಿದ್ದಾರೆ. ಇವರ ನಿರ್ಲಕ್ಷ್ಯಕ್ಕೆ ಹಸುಗೂಸು ಮೃತಪಟ್ಟಿದೆ. ಈ ಕಾರಣದಿಂದ ವೈದ್ಯರನ್ನು ಸೇವೆಯಿಂದ ಕೂಡಲೇ ವಜಾಗೊಳಿಸಬೇಕು. ಜತೆಗೆ ಸೂಕ್ತ ಪರಿಹಾರ ನೀಡಬೇಕೆಂದು ಮೃತರ ಸಂಬಂಧಿಕರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
Kshetra Samachara
04/02/2025 07:11 pm