ಚಾಮರಾಜನಗರ : ಕೃಷಿ ಸಂಕಷ್ಟವನ್ನು ಅರಿಯದೆ, ರೈತರ ನೈಜ ಸಮಸ್ಯೆಗೆ ಪರಿಹಾರ ಸೂಚಿಸದೆ, ಬಜೆಟ್ ಮಂಡನೆಯಲ್ಲಿ ಅನ್ನದಾತನ ಗುಣಗಾನ ಮಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಕೃಷಿಕ್ಷೇತ್ರದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರು ಶನಿವಾರ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಮಾಡುವ ಕುರಿತು, ಕೃಷಿ ಸಾಲ ನೀತಿ ತಿದ್ದುಪಡಿ ಮಾಡುವ ಬಗ್ಗೆ, ಬೆಳೆವಿಮೆ ಪದ್ದತಿ ಬದಲಾಯಿಸುವ ಬಗ್ಗೆ, ಕಬ್ಬು ಬೆಳೆಗಾರರಿಗೆ ಎಫ್ಆರ್ ಪಿ ದರ ನಿಗದಿಪಡಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ರೈತರಿಗೆ ಕಿಸಾನ್ ಕಾರ್ಡ್ ಕೊಡುತ್ತೇವೆ ಎಂದು ಘೋಷಣೆ ಮಾಡಿ, ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರಗಾರಿಕೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಹೈನುಗಾರಿಕೆ ನಡೆಸುವ ರೈತರ ಹಾಲಿನ ಪ್ರೋತ್ಸಾಹ ಧನ ಲೀಟರಿಗೆ ಐದು ರೂ.ಗಳನ್ನು 8 ತಿಂಗಳಿಂದ ಬಿಡುಗಡೆ ಮಾಡಿಲ್ಲ. ಮಹದೇಶ್ವರಬೆಟ್ಟದಲ್ಲಿ ಸಚಿವ ಸಂಪುಟದ ಸಭೆ ನಡೆಸುವ ಮೊದಲು ಹಣ ಬಿಡುಗಡೆ ಮಾಡಿ ನಂತರ ಸಭೆ ನಡೆಸಲಿ. ಇಲ್ಲದಿದ್ದರೆ ಸಂಘಟನೆ ವತಿಯಿಂದ ಸಚಿವ ಸಂಪುಟಕ್ಕೆ ಕಪ್ಪುಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶುಂಠಿ ಬೆಲೆ ಕುಸಿತದಿಂದಾಗಿ ಎಂಐಎಸ್ ಯೋಜನೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಸದ್ಯದಲ್ಲಿಯೇ ಕನಿಷ್ದ ಬೆಂಬಲ ಬೆಲೆಯಾದ 7 ಸಾವಿರ ರೂ.ಗಳಿಗೆ ರೈತರಿಂದ ಶುಂಠಿ ಖರಿದಿಸಲು ಖರೀದಿ ಕೇಂದ್ರಗಳು ಆರಂಭವಾಗಲಿವೆ. ರೈತರು ದಲ್ಲಾಳಿಗಳ ಶೋಷಣೆಗೆ ಬಲಿಯಾಗಿ ಆತುರದಲ್ಲಿ ಶುಂಠಿ ಮಾರಾಟ ಮಾಡಬಾರದು. ಈ ಬಗ್ಗೆ ಚಾಮರಾಜನಗರ, ಮೈಸೂರು ಸಂಸದರು ದೆಹಲಿಯಲ್ಲಿ ಕೂಡಲೇ ವರದಿ ಅನುಮೋದನೆ ಮಾಡಿಸಿ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಆಂದ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಮಸೂದೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ಪರಿಸ್ಥಿತಿಯಲ್ಲಿ ಅದು ಜಾರಿಯಾಗಲಿಲ್ಲ. ರಾಜ್ಯ ಸರ್ಕಾರ ರೈತರ ಹಿತ ಕಾಯುವುದಾದರೆ ನಾಟಕವಾಡದೇ ರಾಜ್ಯದಲ್ಲಿಯೂ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಮಸೂದೆಗೆ ಅನುಮೋದನೆ ನೀಡಲಿ ಒತ್ತಾಯಿಸಿದರು.
Kshetra Samachara
02/02/2025 03:34 pm