ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬೈಪಾಸ್ ರಸ್ತೆಗೆ ಭೂಮಿ ಕೊಡಲು ಮಂಗಳೂರು ರೈತರ ನಕಾರ

ಧಾರವಾಡ : ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮಂಗಳೂರು ಗ್ರಾಮದ ರೈತರು ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಭೂಮಿ ಕೊಡಲು ನಿರಾಕರಿಸಿದ್ದಾರೆ.

ಹೀಗೆ ಧಾರವಾಡ ಭೂ ಸ್ವಾಧೀನ ಕಚೇರಿ (ಕೆಐಎಡಿಬಿ) ಎದುರು ಪ್ರತಿಭಟನೆ ನಡೆಸುತ್ತಿರುವ ಇವರೆಲ್ಲ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ರೈತರು. ಮಂಗಳೂರು ಗ್ರಾಮದಲ್ಲಿ ಹೊಸ ಬೈಪಾಸ್ ರಸ್ತೆ ನಿರ್ಮಿಸುವ ಸಲುವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿಯು ರೈತರಿಗೆ ನೋಟಿಸ್ ಕಳುಹಿಸಿದೆ.

ಯಾವುದೇ ಪೂರ್ವಭಾವಿ ಸಭೆ ಇಲ್ಲದೇ ಕೆಐಎಡಿಬಿಯು ನೋಟಿಸ್ ಕಳುಹಿಸಿದೆ. ಇವರು ನೋಟಿಸ್ ಕಳುಹಿಸಿದ ತಕ್ಷಣ ನಾವು ಭೂಮಿ ಕೊಡಲು ದಡ್ಡರಲ್ಲ. ಫಲವತ್ತಾದ ಭೂಮಿಯನ್ನು ಬೈಪಾಸ್ ರಸ್ತೆಗೆ ನಾವು ಕೊಡುವುದಿಲ್ಲ ಎಂದು ಮಂಗಳೂರು ಗ್ರಾಮದ ರೈತರು ಕೆಐಎಡಿಬಿ ಅಧಿಕಾರಿಗಳಿಗೆ ತಕರಾರು ಸಲ್ಲಿಸಿದ್ದಾರೆ.

ಮಂಗಳೂರು ಗ್ರಾಮದ ಸುಮಾರು 17 ಎಕರೆ 6 ಗುಂಟೆ ಜಮೀನನ್ನು ಇಲಾಖೆ ಬೈಪಾಸ್ ರಸ್ತೆಗಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಆ ಗ್ರಾಮದಲ್ಲಿರುವುದು ಕೇವಲ ತುಂಡು ಭೂಮಿ. ಆ ಭೂಮಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣಕ್ಕೆ ಭೂಮಿ ಕೊಡುವುದು ಬೇಡ ಎಂಬುದು ರೈತರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಮಂಗಳೂರು ಗ್ರಾಮ ಯಾವುದೇ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿಲ್ಲ. ಇಲ್ಲಿ ಬೈಪಾಸ್ ರಸ್ತೆ ನಿರ್ಮಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಅಭಿವೃದ್ಧಿ ಮಾಡುವುದೇ ಆದರೆ, ಫ್ಲೈ ಓವರ್ ಮಾಡಿ ರಸ್ತೆ ಮಾಡಿಕೊಳ್ಳಲಿ. ರಸ್ತೆ ಮಾಡಲು ಇವರಿಗೆ ರೈತರ ಫಲವತ್ತಾದ ಜಮೀನುಗಳೇ ಬೇಕೇ? ಎಂದು ರೈತರು ಪ್ರಶ್ನಿಸಿದ್ದು, ಕೆಐಎಡಿಬಿಯು ಇದನ್ನು ಯಾವ ರೀತಿ ಪರಿಗಣನೆಗೆ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2025 07:01 pm

Cinque Terre

99.81 K

Cinque Terre

1

ಸಂಬಂಧಿತ ಸುದ್ದಿ