ಚಿತ್ರದುರ್ಗ: ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವಾದ ಮಂಗಳವಾರ ಹಿಂದೂ ಧರ್ಮಿಯರ ಪವಿತ್ರ ಹಬ್ಬವಾದ ರಥಸಪ್ತಮಿಯ ಅಂಗವಾಗಿ ಸೂರ್ಯ ದೇವರ ಪೂಜೆಯನ್ನು ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸದಸ್ಯರು ಸಾಮೂಹಿಕವಾಗಿ 108 ಸೂರ್ಯನಮಸ್ಕಾರ, ಅಗ್ನಿಹೋತ್ರ ಹೋಮ ಮಾಡಿ ಸೂರ್ಯದೇವರಿಗೆ ಅರ್ಘ್ಯವನ್ನು ಸಮರ್ಪಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ ಅಂಬೇಕರ್ " ರಥಸಪ್ತಮಿಯು ಸೂರ್ಯ ದೇವರಿಗೆ ಸಮರ್ಪಿತವಾದ ಹಬ್ಬವಾಗಿದೆ ಈ ಪವಿತ್ರ ದಿನದಂದು ಸೂರ್ಯದೇವರಿಗೆ 108 ಸೂರ್ಯ ನಮಸ್ಕಾರ ದೊಂದಿಗೆ ಪೂಜೆ ಸಲ್ಲಿಸುವುದು ಪುಣ್ಯಕರ ಎಂದು ನಂಬಲಾಗಿದೆ 108 ಸಂಖ್ಯೆಯು ಹಿಂದೂ ಧರ್ಮದಲ್ಲಿ ಪವಿತ್ರವಾದ ಸಂಖ್ಯೆ ಎಂದು ಪರಿಗಣಿಸಲಾಗಿದೆ ಈ ಸಂಖ್ಯೆಯು ಬ್ರಹ್ಮಾಂಡದ ಮತ್ತು ಮಾನವ ದೇಹದೊಂದಿಗೆ ಸಂಬಂಧ ಹೊಂದಿದೆ 108 ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ಆಧ್ಯಾತ್ಮಿಕ ಮತ್ತು ದೈಹಿಕ ಲಾಭಗಳು ಸಿಗುತ್ತವೆ.
ರಥಸಪ್ತಮಿಯಂದು ಅಗ್ನಿಹೋತ್ರದ ಮಹತ್ವ ಮಹತ್ವ : ಬೆಳಕು ಶಕ್ತಿ ಮತ್ತು ಜೀವದ ಮೂಲವಾಗಿದ್ದು ಅಗ್ನಿಹೋತ್ರವು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಒಂದು ಮಾರ್ಗವಾಗಿದೆ ಅಗ್ನಿಹೋತ್ರ ಮಾಡುವುದರಿಂದ ಪರಿಸರ ಶುದ್ಧೀಕರಣ ಆರೋಗ್ಯ ಮತ್ತು ಸಮೃದ್ಧಿ ಜನ್ಮಾಂತರಗಳ ಪಾಪಗಳನ್ನು ಕಳೆಯುವುದರ ಜೊತೆಗೆ ಫುಡ್ ನೇಮ್ ಅನ್ನು ಹೆಚ್ಚಿಸುತ್ತದೆ ಮತ್ತು ಮೋಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅದೇ ರೀತಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಅನುಗ್ರಹವನ್ನು ಪಡೆಯಬಹುದು ಹಾಗೂ ಇದು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುವ ಒಂದು ಮಾರ್ಗವಾಗಿದೆ ಎಂದು ನಂಬಲಾಗಿದೆ ಎಂದು ತಿಳಿಸಿದರು.
ಬೆಳಗಿನ ಜಾವದ ಐದು ಗಂಟೆಗೆ ಸೂರ್ಯದೇವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ 20 ರಿಂದ 70 ವಯಸ್ಸಿನ ಎಲ್ಲಾ ಯೋಗ ಸಾಧಕರು ಸ್ವಲ್ಪವೂ ಆಯಾಸವಿಲ್ಲದೆ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸೂರ್ಯದೇವನಿಗೆ ಅಗ್ನಿಹೋತ್ರ ಕುಂಡಕ್ಕೆ ಸಮೀದ (ಕಟ್ಟಿಗೆ/ಬೆರಣಿ ) ಅರ್ಪಿಸಿ, ಕೆಂಪು ಹೂವುಗಳು, ರಕ್ತ ಚಂದನ ಅಕ್ಷತೆಗಳಿಂದ ಕೂಡಿದ ಕೆಂಪು ನೀರಿನ ಅರ್ಗ್ಯವನ್ನು ಪವಿತ್ರ ಶ್ಲೋಕದೊಂದಿಗೆ ಸೂರ್ಯನಿಗೆ ಸಮರ್ಪಿಸಿದರು.
Kshetra Samachara
04/02/2025 03:26 pm