ವಿಜಯನಗರ: ಹೆಣ್ಣು, ಹೊನ್ನು, ಮಣ್ಣಿಗಾಗಿ ಏನು ಬೇಕಾದ್ರೂ ಆಗುತ್ತದೆ. ಇಲ್ಲಿ ಹಣದ ವ್ಯವಹಾರಕ್ಕೆ ಬೆಳ್ಳಂಬೆಳಗ್ಗೆ ಹೆಣ ಬಿದ್ದಿದೆ. ಮನೆಯಲ್ಲಿದ್ದವನನ್ನು ಕರೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹೀಗೆ ಹೆಣವಾಗಿ ಬಿದ್ದಿರೋ ವ್ಯಕ್ತಿ, ಪರಿಶೀಲನೆ ಮಾಡ್ತಿರೋ ಪೊಲೀಸರು, ಕೊಲೆಯಾದ ಸ್ಥಳದಲ್ಲಿ ಗುರುತು ಪತ್ತೆ ಮಾಡ್ತಿರೋ ಪೊಲೀಸ್ ಟೀಂ, ಕುಟುಂಬಸ್ಥರ ಆಕ್ರಂದನ, ಈ ದೃಶ್ಯಗಳು ಕಂಡು ಬಂದಿದ್ದು ಹೊಸಪೇಟೆಯಲ್ಲಿ.
ಹೌದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಹಣಕಾಸಿನ ವಿಚಾರಕ್ಕೆ ವ್ಯಕ್ತಿಯ ಹೆಣ ಬೀಳಿಸಲಾಗಿದೆ. ಹಣಕಾಸಿನ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೊಸಪೇಟೆಯ ನಿವಾಸಿ ತಾರಿಹಳ್ಳಿ ರಾಮಲಿ( 40) ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ನಿನ್ನೆ ರಾತ್ರಿ ಕೊಲೆಯಾದ ತಾರಿಹಳ್ಳಿ ರಾಮಲಿಯನ್ನು ಫೋನ್ ಮಾಡಿ ಕರೆಸಿ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳ- ಗಲಾಟೆಯಾಗಿದೆ. ಗಲಾಟೆಯೂ ವಿಕೋಪಕ್ಕೆ ಹೋಗಿ ಕೊಲೆ ಮಾಡಲಾಗಿದೆ. ಕೊಲೆಯಾದ ರಾಮಲಿಯ ಎದೆ, ಪಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಚಾಕು ಹಾಕಲಾಗಿದೆ. ತೀವ್ರ ರಕ್ತಸ್ರಾವದಿಂದ ಬಿದ್ದು ಒದ್ದಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಗಲಾಟೆಯಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಲಾಗಿರೋ ವ್ಯಕ್ತಿಯನ್ನು ಕೇವಲ 3 ಗಂಟೆಗಳಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ಎಂಬಾತನನ್ನು ಬಂಧಿಸಿರೋ ಪೊಲೀಸರು, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಣಕಾಸಿನ ಸಣ್ಣ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
31/01/2025 01:38 pm