ಹುಬ್ಬಳ್ಳಿ: ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿ, ಅವ್ಯವಸ್ಥೆ ಹಾಗೂ ಪೂರ್ಣಗೊಳ್ಳದ ಕಾಮಗಾರಿಯಿಂದ ಸಾಕಷ್ಟು ಸುದ್ದಿಯಾಗುತ್ತಲೇ ಇದೆ. ಈ ನಡುವೆ ಮಾರ್ಚ್ ಒಳಗೆ ಸ್ಮಾರ್ಟ್ ಸಿಟಿಯ ಅವಧಿ ಮುಕ್ತಾಯಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಿದು ಬೆಳವಣಿಗೆ ಅಂತೀರಾ ತೋರಸ್ತಿವಿ ನೋಡಿ..
ಸ್ಮಾರ್ಟ್‌ಸಿಟಿ ಯೋಜನೆಗಳ ಕಾಮಗಾರಿಗಳ ಹಸ್ತಾಂತರ ಸಲೀಸಾಗಲಿ ಎಂಬ ಉದ್ದೇಶದಿಂದ ಪಾಲಿಕೆ ಆಯುಕ್ತರ ಜಾಗೆಗೆ ಸ್ಮಾರ್ಟ್‌ಸಿಟಿ ಎಂಡಿ ಅವರನ್ನು ತರಲಾಗಿದೆಯೇ? ಇಂಥದೊಂದು ಪ್ರಶ್ನೆ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಬಲು ಜೋರಾಗಿ ಕೇಳಿ ಬರುತ್ತಿದೆ. ಹೌದು.. ಪಾಲಿಕೆ ಆಯುಕ್ತರಾಗಿದ್ದ ಈಶ್ವರ ಉಳ್ಳಾಗಡ್ಡಿ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಆಯುಕ್ತರನ್ನಾಗಿ ವರ್ಗ ಮಾಡಲಾಗಿದೆ. ಆ ಜಾಗೆಗೆ ಸ್ಮಾರ್ಟ್‌ಸಿಟಿ ಎಂಡಿ ಆಗಿರುವ ರುದ್ರೇಶ ಗಾಳಿ ಅವರನ್ನು ತರಲಾಗಿದೆ. ಐಎಎಸ್, ಕೆಎಎಸ್ ಅಧಿಕಾರಿಗಳ ವರ್ಗಾವಣೆ ಎಲ್ಲವೂ ಸಹಜ. ಇದು ಕೂಡ ಹಾಗೆ ಆಗಿರಬಹುದು ಎಂದು ಮೇಲ್ನೋಟಕ್ಕೆ ಅನಿಸಿದರೂ ಒಳಹೊಡೆತ ಮಾತ್ರ ಬೇರೆನೇ ಇದೆ ಎಂಬ ಗುಲ್ಲು ಮಾತ್ರ ಹಬ್ಬಿರುವುದು ಸತ್ಯ. 2018ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಪ್ರಾರಂಭವಾಗಿದೆ. ಆಗಿನಿಂದ ಈ ವರೆಗೆ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿಗೆ ಆಗುತ್ತಲೇ ಇಲ್ಲ. ಮಹಾನಗರದಲ್ಲಿ ಬರೋಬ್ಬರಿ 63 ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿ ಕೈಗೊಂಡಿದೆ. ಅದರಲ್ಲಿ 61 ಕಾಮಗಾರಿಗಳು ಪೂರ್ಣವಾಗಿವೆ ಎಂದು ಸ್ಮಾರ್ಟ್‌ಸಿಟಿ ಏನೋ ಹೇಳಿಕೊಳ್ಳುತ್ತಿದೆ. ಇದೇ ಮಾರ್ಚ್‌ಗೆ ಯೋಜನೆಯೇ ಮುಕ್ತಾಯವಾಗಲಿದೆ. ಅಷ್ಟರೊಳಗೆ ಎಲ್ಲ ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸಬೇಕು. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಎಂಡಿ ಅವರನ್ನೇ ಪಾಲಿಕೆ ಆಯುಕ್ತರನ್ನಾಗಿ ಮಾಡಿ ಕೂಲ್ ಆಗಿ ಕೆಲಸ ಮುಗಿಸಬೇಕು ಎಂಬುವಂತ ತಂತ್ರ ಸಾಕಷ್ಟು ಸುದ್ದಿಯಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳ ಉಸ್ತುವಾರಿಯೂ ರುದ್ರೇಶ ಗಾಳಿ ಅವರದ್ದೇ ಆಗಿದೆ. ಇದೀಗ ಮಾರ್ಚ್‌ನೊಳಗೆ ಹಸ್ತಾಂತರಿಸಿಕೊಳ್ಳಬೇಕು. ತಮ್ಮ ಉಸ್ತುವಾರಿಯಲ್ಲೇ ಆಗಿರುವ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳಲು ಸಲೀಸಾಗಲೆಂದು ಈ ವರ್ಗಾವಣೆ ಮಾಡಲಾಗಿದೆಯೇ? ಇದರಲ್ಲಿ ಏನಾದರೂ ರಾಜಕಾರಣ ಅಡಗಿದೆಯಾ? ಇಷ್ಟು ದಿನ ಯಾವೊಂದು ಕಾಮಗಾರಿಯೂ ಸಮರ್ಪಕವಾಗಿಲ್ಲ. ಯಾವುದೇ ಕಾರಣಕ್ಕೂ ಹಸ್ತಾಂತರಿಸಿಕೊಳ್ಳಬಾರದು ಎಂದು ಒತ್ತಾಯಿಸುತ್ತಿದ್ದ ಪಾಲಿಕೆ ಸದಸ್ಯರು ಈಗೇನು ಮಾಡುತ್ತಾರೆ ಎಂಬುವುದು ಸಾರ್ವಜನಿಕ ಯಕ್ಷ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಪಾಲಿಕೆ ಆಯುಕ್ತರ ವರ್ಗಾವಣೆ ಏನೋ ಸಹಜ. ಆದರೆ ಅವರ ಜಾಗೆಗೆ ಈಗ ಸ್ಮಾರ್ಟ್‌ಸಿಟಿ ಬಗ್ಗೆ ಗೊಂದಲ ಇರುವಾಗಲೇ ಅದರ ಎಂಡಿ ಅವರನ್ನೇ ಪಾಲಿಕೆ ಆಯುಕ್ತರನ್ನಾಗಿ ಮಾಡಿರುವುದರ ಹಿಂದಿರುವ ಮರ್ಮವೇನು? ಎಂಬ ಪ್ರಶ್ನೆಯಂತೂ ಕಾಡುತ್ತಿರುವುದಂತೂ ಸತ್ಯ.
Kshetra Samachara
30/01/2025 09:17 pm