ಬೆಳಗಾವಿ: ಪ್ರಯಾಗ್ ರಾಜ್ ನಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿದ್ದರು. ಇಂಥ ಸಂದರ್ಭದಲ್ಲಿ ಆ ಘಟನೆ ಆಗಬಾರದಿತ್ತು. ಆದರೆ, ಅನಾಹುತ ಸಂಭವಿಸಿದೆ. ಮೃತರ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಇಬ್ಬರ ಮೃತದೇಹಗಳು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುತ್ತಿವೆ. ನಾನು ಕೂಡ ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ನಮನ ಸಲ್ಲಿಸುತ್ತೇನೆ. ನಾಲ್ವರು ಮೃತಪಟ್ಟಿದ್ದಾರೆ. ಅವರಲ್ಲಿ 24 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಈಗಷ್ಟೇ ಕಾಲೇಜು ಮುಗಿಸಿದ್ದರು. ಇನ್ನು ಜೀವನ ದೊಡ್ಡದಿತ್ತು. ಈ ಸಂದರ್ಭದಲ್ಲಿ ನಾವು ಮೃತರ ಕುಟುಂಬಸ್ಥರ ಜೊತೆಗೆ ಇದ್ದೇವೆ ಎಂದರು.
ಉತ್ತರಪ್ರದೇಶ ಸರ್ಕಾರದ ವೈಫಲ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 144 ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಜನದಟ್ಟಣೆ ನಿಯಂತ್ರಿಸಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ. ಆದರೂ ಜನ ತಮ್ಮ ಸುರಕ್ಷತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಅದೇ ರೀತಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ನಮ್ಮ ತಂದೆ ಸತೀಶ್ ಜಾರಕಿಹೊಳಿ ಅವರು ವೈಯಕ್ತಿಕವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳ ನಿರ್ದೇಶನಕ್ಕೆ ಕಾಯುತ್ತಿದ್ದೇವೆ ಎಂದರು
PublicNext
30/01/2025 08:11 pm