ಖಾನಾಪೂರ: ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕು ಕರ್ನಾಟಕ ರಾಜ್ಯದಲ್ಲಿದ್ದರೂ ಗಡಿ ಭಾಗದ ಸರಕಾರಿ ಮರಾಠಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನ ಕಡೆಗಣಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಶಿಕ್ಷಕರಿಂದ ಕನ್ನಡದ ಕಗ್ಗೊಲೆಯಾಗ್ತಿದೆ. ಬಹಳಷ್ಟು ಶಾಲೆ ಗೋಡೆಗಳ ಮೇಲೆಲ್ಲಾ ಮರಾಠಿ ನಾಮಫಲಕಗಳದ್ದೇ ದರ್ಬಾರ್. ಹೌದು ಶೇ. 60 ಪ್ರತಿಶತ ಕನ್ನಡ ಬಳಸಬೇಕೆಂದು ಆದೇಶವಿದೆಯೆಂದು ಗೊತ್ತಿದ್ದರೂ ಅಧಿಕಾರಿಗಳು ಉದ್ಧಟತನ ಮೆರೆಯುತ್ತಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡದ ಅನ್ನ ತಿಂದು ದರ್ಪ ತೋರುತ್ತಿರುವ ಶಿಕ್ಷಕರ ಮೇಲೆ ಕ್ರಮ ವಹಿಸದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಾಗಿದ್ದಾರೆ.
ತಾಲೂಕಿನ ಗರ್ಕಲಗುಂಜಿ ಗ್ರಾಮದ ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯ ಮೇಲೆ ಡಾ. ಬಾಬಾಸಾಹೇಬ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಾದ ಸುಭಾಷ ಚಲವಾದಿ, ರಮೇಶ ಕೊಲಕಾರ ತಂಡದಿಂದ ದಾಳಿ ಮಾಡಿದಾಗ ಶಿಕ್ಷಕರ ಕೃತ್ಯ ಬಯಲಾಗಿದೆ. ಹಾಗೂ ಶಾಲೆಯಲ್ಲಿ ಗಣರಾಜ್ಯೋತ್ಸವದಂದು ಕಾರ್ಯಕ್ರಮ ಮುಗಿಸಿ ಅಂಬೇಡ್ಕರ್ ಫೋಟೊ ಬೇಕಾಬಿಟ್ಟಿ ಬಿಸಾಕಿ ಅವಮಾನವೆಸಗಿದ್ದಾರೆಂದು ಆರೋಪಿಸಲಾಗಿದೆ.
ಇದೇ ಗ್ರಾಮದ ಶಿಕ್ಷಕರಾದ ಯಶವಂತ ಮಲ್ಲು ಪಾಟೀಲ ಎಂಬ ವ್ಯಕ್ತಿ ಕಳೆದ 19 ವರ್ಷಗಳಿಂದ ಇದೊಂದೇ ಶಾಲೆಯಲ್ಲಿದ್ದು ಸಾರ್ವಜನಿಕರ ಮೇಲೆ ದರ್ಪ ತೋರುತ್ತಾ ಕೆಲಸದ ಸಮಯದಲ್ಲಿ ಪ್ರತಿದಿನ ಶಾಲೆಗೆ ಹಾಜರಿ ಹಾಕಿ ತನ್ನ ಖಾಸಗಿ ಕೆಲಸ ಮಾಡಿಕೊಳ್ಳುತ್ತಾನೆಂದು ಆರೋಪಿಸಲಾಗಿದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಶೀಘ್ರ ಕ್ರಮ ಜರುಗಿಸದಿದ್ದರೆ ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
Kshetra Samachara
30/01/2025 05:59 pm